ಭಾರತದ ಶಿಲಾಚರಿತ್ರೆ ಮತ್ತು ಶಿಲಾರಚನೆ
 ಭಾರತ ಉಪಖಂಡದ ಶಿಲಾಚರಿತ್ರೆ ಮತ್ತು ಶಿಲಾರಚನೆ ಕುರಿತ ಪ್ರಸಕ್ತ ಲೇಖನವನ್ನು ಈ ಮುಂದಿನ ಶೀರ್ಷಿಕೆಗಳ ಅಡಿಯಲ್ಲಿ ಬಿತ್ತರಿಸಿದೆ:

1. ಭೌಗೋಲಿಕ ವ್ಯಾಪ್ತಿ
(i) ಶಿಲಾಚರಿತ್ರೆಯ ವ್ಯತ್ಯಾಸಗಳು
(ii) ಶಿಲಾರಚನೆಯ ವ್ಯತ್ಯಾಸಗಳು
(iii) ಮೇಲ್ಮೈಲಕ್ಷಣಗಳ ವ್ಯತ್ಯಾಸಗಳು
(iv) ನದೀ ಪಾತ್ರಗಳು

2. ಭೂಚರಿತ್ರೆ
(i) ಆರ್ಷೇಯ ಕಲ್ಪ
(ii) ಪುರಾಣ ಕಲ್ಪ
(iii) ದ್ರಾವಿಡ ಕಲ್ಪ
(iv) ಆರ್ಯ ಕಲ್ಪ
(v) ಗೊಂಡ್ವಾನಾ ಸಮುದಾಯ
(vi) ಹಿಮಾಲಯದ ಆರ್ಯ ಕಲ್ಪ
(vii) ಕಾಶ್ಮೀರದ ಮಧ್ಯಜೀವಿ ಕಲ್ಪ
(viii) ಇತರ ಮಧ್ಯಜೀವಿ ಕಲ್ಪ ಶಿಲೆಗಳು
(ix) ದಖನ್ ಜ್ವಾಲಾಮುಖಿ ಶಿಲೆ
(x) ಹಿಮಾಲಯದ ಉದಯ
(xi) ಟರ್ಷಿಯರಿ ಕಲ್ಪ
(xii) ಇಯೊಸೀನ್ ಸಮುದಾಯ
(xiii) ಓಲಿಗೊಸೀನ್ ಮತ್ತು ಮಯೊಸೀನ್ ಸಮುದಾಯಗಳು
(xiv) ಶಿವಾಲಿಕ್ ಸಮುದಾಯ
(xv) ಪ್ಲೀಸ್ಟೊಸೀನ್-ನೀರ್ಗಲ್ಲುಯುಗ
(xvi) ಸಿಂಧೂ-ಗಂಗಾ ಮೆಕ್ಕಲು ನಿಕ್ಷೇಪ
(xvii) ಥಾರ್ ಮರುಭೂಮಿ
(xviii) ಲ್ಯಾಡರೈಟ್
(xix) ಮೆಕ್ಕಲು ನಿಕ್ಷೇಪ
(xx) ಕಪ್ಪು ಹತ್ತಿ ಮಣ್ಣು
(xxi) ಮಾನವ ಕಲ್ಪ

1. ಭೌಗೋಲಿಕ ವ್ಯಾಪ್ತಿ: ಭಾರತ ಉಪಖಂಡದ ವಿಸ್ತೀರ್ಣ 20,34,080 ಚಕಿಮೀ. ವ್ಯಾಪ್ತಿ ಉತ್ತು ಅಕ್ಷಾಂಶ 80-370 ಮತ್ತು ಪೂರ್ವರೇಖಾಂಶ 610-970. ಇಲ್ಲಿಯ ಶಿಲಾಸ್ತೋಮಗಳು ಅಕ್ಕಪಕ್ಕದ ದೇಶಗಳಾದ ನೇಪಾಲ, ಬರ್ಮ ಸಿಕ್ಕಿಮ್ ಮತ್ತು ಪಾಕಿಸ್ತಾನಗಳ ಭೂಭಾಗಗಳಿಗೂ ಹಬ್ಬಿವೆ. ಭೂವೈಜ್ಞಾನಿಕವಾಗಿ ಈ ಉಪಖಂಡದಲ್ಲಿ ಮೂರು ವಿಭಾಗಗಳನ್ನು ಗುರುತಿಸಬಹುದು. 1 ತ್ರಿಕೋನಾಕಾರವಾಗಿ ಪ್ರಸ್ಥಭೂಮಿಗಳನ್ನು ಒಳಗೊಂಡ ಪರ್ಯಾಯದ್ವೀಪ ಪ್ರದೇಶ; 2 ಪರ್ವತಶ್ರೇಣಿಗಳನ್ನು ಒಳಗೊಂಡ ಹಿಮಾಲಯ ಪರ್ವತ ಸ್ತೋಮ ಪ್ರದೇಶ; 3 ಸಿಂಧೂ-ಗಂಗಾ ನದಿಗಳ ಮೆಕ್ಕಲು ಸಂಚಯನದಿಂದ ಕೂಡಿದ ಬಯಲು ಪ್ರದೇಶ. ಇವು ಶಿಲಾಚರಿತ್ರೆ, ಶಿಲಾರಚನೆ ಮತ್ತು ಮೇಲ್ಮೈಲಕ್ಷಣಗಳಲ್ಲಿ ಅನೇಕ ವ್ಯತ್ಯಾಸಗಳನ್ನು ತೋರಿಸುತ್ತವೆ.

(i) ಶಿಲಾಚರಿತ್ರೆಯ ವ್ಯತ್ಯಾಸಗಳು: ಭಾರತ ಪರ್ಯಾಯದ್ವೀಪ ಪ್ರದೇಶ ಅರ್ಷೇಯ ಕಲ್ವದಿಂದಲೂ ಭೂಸವೆತಕ್ಕೊಳಗಾದ ಸವಕಲ ಸಮತಲ ಪ್ರದೇಶ. ಭೂವೈಜ್ಞಾನಿಕವಾಗಿ ನಾನಾ ರೀತಿಯಲ್ಲಿ ಉದ್ಭವಿಸಿದ ಇಲ್ಲಿಯ ಶಿಲಾಸಮೂಹಗಳು ಅನೇಕ ಸಾರಿ ಭೂಚಲನ ವಲನಗಳಿಂದ ಕ್ಷೋಭೆಗೀಡಾಗಿ, ಉನ್ನತಪ್ರಮಾಣದ ರೂಪಾಂತರಗಳನ್ನು ಹೊಂದಿ ಅತಿ ಗಡುಸಾದ ಶಿಲೆಗಳಿಂದ ಕೂಡಿದ ಸ್ಥಿರಪ್ರದೇಶವಾಗಿವೆ. ತೀರಪ್ರದೇಶದ ಕೆಲವು ಸ್ಥಳಗಳಲ್ಲಿ ಮಧ್ಯಾಂತರ ಮತ್ತು ಆಧುನಿಕ ಕಲ್ಪಗಳ ಶಿಲೆಗಳಿವೆ. ಪರ್ಯಾಯದ್ವೀಪದ ಉತ್ತರಭಾಗ ದಖನ್ ಜ್ವಾಲಾಮುಖಿ ಶಿಲೆಗಳಿಂದ ಆವರಿಸಲ್ಪಟ್ಟಿದೆ.
ಹಿಮಾಲಯ ಪರ್ವತಸ್ತೋಮ ಪ್ರದೇಶ ಪುರಾಣಕಲ್ಪದಿಂದ ಮಾನವ ಕಲ್ಪದ ತನಕ ಮಹತ್ತರವಾಗಿ ಪೇರಿಸಲ್ಪಟ್ಟ ಜಲಜಶಿಲಾಸಮುದಾಯಗಳಿಂದ ಕೂಡಿದೆ. ಮಧ್ಯಾಂತರ ಯುಗದಿಂದೀಚೆಗೆ ಇಲ್ಲಿಯ ಶಿಲಾಸ್ತೋಮಗಳು ಭೂಚಲನವಲನಗಳಿಂದ ಅತಿಶಯವಾಗಿ ಒತ್ತರಿಸಿ ಪರ್ವತ ಪಂಕ್ತಿಗಳಾಗಿ ಮೇಲಕ್ಕೆತ್ತಲ್ಪಟ್ಟಿವೆ.
ಸಿಂಧೂ-ಗಂಗಾಬಯಲು ಪ್ರದೇಶ ಪರ್ಯಾಯದ್ವೀಪ ಮತ್ತು ಹಿಮಾಲಯ ಪರ್ವತಪ್ರದೇಶಗಳ ಮಧ್ಯದ ಮುನ್‍ತಗ್ಗುವಿನಲ್ಲಿ ಪ್ಲೋಸ್ಟೊಸೀನ್ ಯುಗದಿಂದೀಚೆಗೆ ಸಂಚಯನಗೊಂಡ ಮೆಕ್ಕಲು ಮಣ್ಣು. ಜೇಡಿ ಮತ್ತು ಮರಳುಗಳಿಂದ ಕೂಡಿದೆ.

(ii) ಶಿಲಾರಚನೆಯ ವ್ಯತ್ಯಾಸಗಳು: ಶಿಲಾರಚನೆಯಲ್ಲಿ ಪರ್ಯಾಯದ್ವೀಪ ಒಂದು ಸ್ಥಿರಪ್ರದೇಶ. ಪುರಾಣಕಲ್ಪದ ಬಳಿಕ ಈ ಪ್ರದೇಶ ಯಾವ ಭೂಚಲನವಲನಗಳಿಗೂ ತುತ್ತಾಗಲಿಲ್ಲ. ಮೇಲಣ ಗೊಂಡ್ವಾನ, ಕ್ರಿಟೇಷನ್ ಮತ್ತು ಟರ್ಷಿಯರಿ ಯುಗಗಳಲ್ಲಿ ಆಗಾಗ್ಗೆ ಸಮುದ್ರ ಒಳನುಗ್ಗಿದುದರಿಂದ ಕೆಲವು ಕಡೆ ಜಲಶಿಲೆಗಳು ಸಂಚಯನಗೊಂಡಿವೆ.
ಹಿಮಾಲಯ ಪರ್ವತ ಪ್ರದೇಶದಲ್ಲಿ ತೀವ್ರತರ ಪರ್ವತಜನ್ಯ ಚಲನೆಗಳಿಂದ ಶಿಲೆಗಳಲ್ಲಿ ವಿಭಿನ್ನರೀತಿಯ ಮಡಿಕೆಗಳು, ವ್ಯತಿರಿಕ್ತಸ್ತರಭಂಗಗಳು, ಸ್ತರಗಳ ಮೇಲು ಚಾಚುವಿಕೆ, ಬೃಹತ್ ಭೂಕಿಂಡಿಗಳು ಮುಂತಾದ ರಚನೆಗಳು ರೂಪುಗೊಂಡಿವೆ. ಈ ಚಲನೆಗಳು ಇನ್ನೂ ಸಮಾಪ್ತಿಯಾಗದೆ ಆಗಾಗ್ಗೆ ಚಟುವಟಿಕೆಗೊಳ್ಳುವುದರಿಂದ ಭೂಕಂಪನಗಳು ಸಂಭವಿಸುತ್ತಿರುತ್ತವೆ.
ಸಿಂಧೂ-ಗಂಗಾ ಬಯಲು ಪ್ರದೇಶದಲ್ಲಿ ಹಿಮಾಲಯದ ನದಿಗಳು ಕೊಚ್ಚಿತಂದ ಮೆಕ್ಕಲು, ಮಡ್ಡಿಗಳು ಸಂಚಯನಗೊಂಡು ಅಲ್ಲಿಯ ಶಿಲಾಸ್ತರಗಳ ಭೂವೈಜ್ಞಾನಿಕ ವಿಷಯವನ್ನು ತೆರೆಯ ಹಿಂದೆಸರಿಯುವಂತೆ ಮಾಡಿವೆ.

(iii) ಮೇಲ್ಮೈಲಕ್ಷಣಗಳ ವ್ಯತ್ಯಾಸಗಳು: ಭಾರತ ಪರ್ಯಾಯ ದ್ವೀಪ ಭೂಮಂಡಲದ ಒಂದು ಸ್ಥಿರಪ್ರದೇಶ ಮತ್ತು ಪ್ರಾಚೀನ ಪ್ರಸ್ಥಭೂಮಿ. ಇಲ್ಲಿಯ ಪರ್ವತಗಳು ಹಲವಾರು ಯುಗಗಳಿಂದ ಸುತ್ತಮುತ್ತಲ ಪ್ರದೇಶಗಳು ವಿವಿಧ ರೀತಿಯಲ್ಲಿ ಸವೆದು ಉಂಟಾದುದರಿಂದ ಇವನ್ನು ಸವೆದುಳಿದ ಪರ್ವತಗಳು ಎಂದು ಕರೆಯಲಾಗಿದೆ. ಅರಾವಳಿ ಪರ್ವತಗಳು ಭೂಚಲನೆ ಮತ್ತು ಪರ್ವತಜನ್ಯ ಚಲನೆ ಅಲ್ಲದೇ ನಾನಾ ತರಹದ ಸ್ತರಭಂಗಗಳಿಂದಲೂ ನಿರ್ಮಿತವಾಗಿರುವುದರಿಂದ ಇವನ್ನು ಕಡಿದ ಶಿಲಾಪರ್ವತಗಳು ಎಂದು ಕರೆಯಲಾಗಿದೆ. ಮಧ್ಯ ಮತ್ತು ಪಶ್ಚಿಮ ಪರ್ಯಾಯ ದ್ವೀಪದ ಪರ್ವತಗಳು ಮಟ್ಟವಾದ ಶಿರಭಾಗವುಳ್ಳ ದಖನ್ ಜ್ವಾಲಾಮುಖಿ ಶಿಲೆಗಳಿಂದ ಆವರಿಸಲ್ಪಟ್ಟಿವೆ. ಇವು ಕ್ರಿಟೇಷಿಯನ್ ಯುಗದ ಅಂತ್ಯ ಅಥವಾ ಟರ್ಷಿಯರಿ ಯುಗದ ಪ್ರಾರಂಭದಲ್ಲಿ ದಖನ್ ಜ್ವಾಲಾಮುಖಿಗಳಿಂದ ಹೊರಹೊಮ್ಮಿದ ಶಿಲಾರಸಗಳು ಘನೀಭವಿಸಿದುದರಿಂದ ಉಂಟಾದವು.

ಹಿಮಾಲಯ ಪರ್ವತ ಪ್ರದೇಶದಲ್ಲಿ ಭೂವೈಜ್ಞಾನಿಕವಾಗಿ ಮಧ್ಯಾಂತರ ಜೀವಿಕಲ್ಪದಿಂದ ಆಧುನಿಕ ಜೀವಿಕಲ್ಪದ ವೇಳೆಗೆ ಉದ್ಭವಗೊಂಡ ಪರ್ವತ ಪಂಕ್ತಿಗಳು ಬಿಲ್ಲಿನಾಕಾರವಾಗಿ 2400 ಕಿಮೀ ಉದ್ದ ವ್ಯಾಪಿಸಿದ್ದು ಕಾಶ್ಮೀರದಿಂದ ಅಸ್ಸಾಮ್‍ವರೆಗೆ ಹಬ್ಬಿವೆ. ಪಶ್ಚಿಮದಲ್ಲಿ ಇವು ಬಲೂಚಿಸ್ತಾನದ ಬೆಟ್ಟಗಳನ್ನು ಕೂಡಿ ಮುಂದುವರಿಯುತ್ತವೆ. ಪೂರ್ವದಲ್ಲಿ ಬರ್ಮ ಪರ್ವತಶ್ರೇಣಿಗಳಲ್ಲಿ ವಿಲೀನಗೊಳ್ಳುತ್ತವೆ.

ಸಿಂಧೂ-ಗಂಗಾ ಬಯಲು ಪ್ರದೇಶದ ಮೇಲ್ಮೈ, ಎತ್ತರ ಮತ್ತು ತಗ್ಗುಗಳಿಲ್ಲದೆ ಸಮತಟ್ಟಾಗಿವೆ. ಪರ್ಯಾಯದ್ವೀಪದ ಮತ್ತು ಪರ್ಯಾಯ ದ್ವೀಪಾಂತರದ ಶಿಲಾಸ್ತರಗಳ ಸಂಬಂಧ ಈ ಪ್ರದೇಶದಲ್ಲಿದ್ದರೂ ನದಿಗಳ ಬೃಹನಿಕ್ಷೇಪಗಳಿಂದಾಗಿ ಭೂವೈಜ್ಞಾನಿಕ ದೃಷ್ಟಿಯಲ್ಲಿ ನಿಸ್ಸಾರ ಪ್ರದೇಶವಾಗಿದೆ. ಆದಾಗ್ಯೂ ಫಲವತ್ತಾದ ಪ್ರದೇಶಕ್ಕೆ ವ್ಯವಸಾಯಕ್ಕೆ. ಗತಕಾಲದ ಚರಿತ್ರೆ ಮತ್ತು ನಾಗರಿಕತೆಗೆ ಪ್ರಪಂಚದಲ್ಲೇ ಇದು ಪ್ರಸಿದ್ಧವಾದ ಪ್ರಮುಖ ಪ್ರದೇಶ.

(iv) ನದೀ ಪಾತ್ರಗಳು: ಪರ್ಯಾಯದ್ವೀಪದ ಪುರಾತನ ನದಿಗಳು ನಿರಂತರ ಭೂಸವೆತದಿಂದ ಶಿಲೆಗಳ ತಳಮಟ್ಟ ಮುಟ್ಟಿ ಸಮತಳ ಪ್ರದೇಶಗಳಲ್ಲಿ ವೃದ್ಧಾಪ್ಯ ಮುಟ್ಟಿದಂತೆ ಹರಿಯುತ್ತಿವೆ. ಇವು ತಗ್ಗಾದ ಮತ್ತು ವಿಸ್ತಾರವಾದ ಕಣಿವೆಗಳನ್ನು ನಿರ್ಮಿಸಿವೆ. ಹಿಮಾಲಯ ಪರ್ವತ ಪ್ರದೇಶದ ನದಿಗಳು ಭೂವೈಜ್ಞಾನಿಕವಾಗಿ ಇತ್ತೀಚಿನವು. ಅಲ್ಲದೆ ಇವು ಯೌವನಾವಸ್ಥೆಯ ಶಕ್ತಿಯಿಂದ ಹರಿವ ದಾರಿಯಲ್ಲಿ ಶಿಲೆಗಳನ್ನು ತೀವ್ರವಾಗಿ ಕೊರೆದು ಅತಿ ಅಳವಾಗಿಯೂ ಕಡಿದಾಗಿಯೂ ಇರುವ ಕಣಿವೆಗಳನ್ನು ನಿರ್ಮಿಸಿವೆ. ಮಾರ್ಗ ಬದಲಾವಣೆ, ತಲೆಮುಖಕೊರೆತ, ಪಾತ್ರ ಸಮ್ಮಿಳನ ಮುಂತಾದ ಕ್ರಿಯೆಗಳಲ್ಲಿ ಇವು ಪ್ರಸಿದ್ಧವಾಗಿವೆ. ಸಿಂಧೂ-ಗಂಗಾ ಬಯಲು ಪ್ರದೇಶದಲ್ಲಿ ನದಿಗಳು ಮಂದಗಮನದಲ್ಲಿ ಸಮುದ್ರದೆಡೆ ಸಾಗುವುವು.

2 ಭೂ-ಚರಿತ್ರೆ: ಭಾರತಾದ್ಯಂತ ಪ್ರಸರಿಸಿರುವ ಶಿಲಾಸಮುದಾಯಗಳನ್ನು ಭಾರತ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಮಹಾ ನಿರ್ದೇಶಕರಾಗಿದ್ದ ತಾಮಸ್ ಹಾಲ್ಲೆಂಡ್ ಎಂಬವರು 1904ರಲ್ಲಿ ವೈದಿಕ ಅಥವಾ ಅರ್ಷೇಯ ಕಲ್ಪ. ಪುರಾಣ ಕಲ್ಪ. ದ್ರಾವಿಡಕಲ್ಪ ಮತ್ತು ಆರ್ಯ ಕಲ್ಪ ಎಂಬ ನಾಲ್ಕು ಮುಖ್ಯವರ್ಗಗಳಾಗಿ ವಿಭಾಗಿಸಿದರು. ಅಂತಾರಾಷ್ಟ್ರೀಯ ಮಾದರಿ ಭೂಕಾಲಮಾನದ ಪ್ರಕಾರ ಈ ಶಿಲಾಸಮುದಾಯಗಳನ್ನು ವಿಭಜಿಸುವುದಾದರೆ ಭಾರತದ ಅರ್ಷೇಯಕಲ್ಪ ಅಂತಾರಾಷ್ಟ್ರೀಯ ಅರ್ಷೇಯ ಕಲ್ಪಕ್ಕೆ ಸರಿಸಮಾನವಾಗಿದೆ. ಪುರಾಣ ಕಲ್ಪ ಅರ್ಷೀಯ ಕಲ್ಪದ ಅಂತ್ಯದಿಂದ ಕೇಂಬ್ರಿಯನ್ ಯುಗದ ಪ್ರಾರಂಭದ ತನಕ ಹಬ್ಬಿರುತ್ತದೆ. ಕೇಂಬ್ರಿಯನ್ ಯುಗದ ಶಿಲಾಸಮುದಾಯಗಳಿಂದ ಪ್ರಾರಂಭಗೊಂಡು ಮಧ್ಯಕಾರ್ಬಾನಿಫೆರಸ್ ಯುಗದ ತನಕದ ಶಿಲೆಗಳು ದ್ರಾವಿಡಕಲ್ಪಕ್ಕೆ ಸೇರಿದವೆಂದೂ ಮೇಲಣ ಕಾರ್ಬಾನಿಫೆರಸ್ ಯುಗದಿಂದ ಮಧ್ಯಮ ಜೀವಿಕಲ್ಲು ಮತ್ತು ಆಧುನಿಕ ಜೀವಿಕಲ್ಪಗಳೂ ಪ್ಲೀಸ್ಟೋಸಿನ್ ಸೇರಿ ಎಲ್ಲ ಶಿಲೆಗಳೂ ಆರ್ಯಕಲ್ಪಕ್ಕೆ ಸೇರಿದವೆಂದೂ ಪರಿಗಣಿಸಲಾಗಿದೆ. ಭಾರತದ ಮುಖ್ಯ ಭೂಚರಿತ್ರಾವಿಭಾಗಗಳನ್ನು ಪ್ರಪಂಚದ ಮಾದರಿ ಭೂಚರಿತ್ರಾ ವಿಭಾಗಗಳ ಜೊತೆಗೆ ಸಮತೋಲನೆಗೈದು ಅದು ಮುಖ್ಯವಾಗಿ ರೂಪುಗೊಂಡಿರುವ ಪ್ರದೇಶಗಳನ್ನು ಈ ಪುಟದ ಕೆಳಗೆ ತೋರಿಸಿರುವ ಪಟ್ಟಿಯಲ್ಲಿ ಕೊಟ್ಟಿದೆ.

(i) ಆರ್ಷೇಯ ಕಲ್ಪ: ಪ್ರಪಂಚದಲ್ಲಿ ಅತ್ಯಂತ ಪ್ರಾಚೀನವಾದ ಹಾಗೂ ಭೂಮಿಯ ಉಗಮ ಕಾಲದಲ್ಲಿ ರೂಪುಗೊಂಡ ಮೊತ್ತಮೊದಲ ಶಿಲೆಗಳನ್ನು ಆರ್ಷೇಯ ಕಲ್ಪದ ಶಿಲೆಗಳೆಂದು ಕರೆಯುತ್ತಾರೆ. ಭಾರತದಲ್ಲಿರುವ ಇಂಥ ಮೊದಲ ಅಡಿಪಾಯದ ನೈಸ್, ಶಿಸ್ಟ್ ಮತ್ತು ಸ್ಛಟಿಕೀಕರಣ ರೂಪಾಂತರಗೊಂಡಿರುವ ಶಿಲೆಗಳಿಗೆ ವೈದಿಕ ಕಲ್ಪದ ಶಿಲಾಸ್ತೋಮಗಳೆಂದು ಹಾಲ್ಲೆಂಡ್ ಹೆಸರಿಸಿದರು. ಭೂವಿಜ್ಞಾನ ಚರಿತ್ರೆಯಲ್ಲಿ ಈ ಹೆಸರು ಚಲಾವಣೆಗಳಿಸದೆ ಆರ್ಷೇಯ ಕಲ್ಪದ ಶಿಲಾ ಸಮೂಹ ಎಂಬ ಹೆಸರೇ ಬಳಕೆಗೆ ಬಂದಿದೆ. ಆರ್ಷೇಯ ಕಲ್ಪದ ಶಿಲೆಗಳು ಭಾರತದಲ್ಲಿ ಸುಮಾರು 2 ಮಿಲಿಯನ್ ಚಕಿಮೀ ಪ್ರದೇಶ ಆಕ್ರಮಿಸಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ, ಛೋಟಾನಾಗಪುರ, ರಾಜಸ್ಥಾನ ಮತ್ತು ಕಾಶ್ಮೀರದಿಂದ ಸಿಕ್ಕಿಮ್‍ವರೆಗೆ ಹರಡಿವೆ.

ವಿವಿಧ ಶಿಲಾಚರಿತ್ರೆ ಮತ್ತು ರಚನಾ ವ್ಯತ್ಯಾಸಗಳುಳ್ಳ ಐದು ಮುಖ್ಯ ಆರ್ಷೇಯ ಶಿಲಾ ಪ್ರದೇಶಗಳು ಭಾರತದಲ್ಲಿವೆ: 1 ಧಾರವಾಡ ಭೂಭಾಗದ ಶಿಲೆಗಳು ಅರ್ಷೇಯ ಕಲ್ಪದ ಪ್ರಾರಂಭದಿಂದ ಅಂತ್ಯದ ತನಕ ಭೂಚರಿತ್ರೆಯನ್ನು ಸಾರುವ ಶಿಲಾ ಸಮುದಾಯಗಳನ್ನು ಹೊಂದಿವೆ. 2 ಎರಡನೆಯದಾದ ಪೂರ್ವ ಘಟ್ಟಗಳ ಪ್ರಾಂತ್ಯ ಕೆಳಗಣ, ಮಧ್ಯಮ ಮತ್ತು ಮೇಲಣ ಆರ್ಷೇಯಕಲ್ಪದ ಪ್ರಾರಂಭದ ಶಿಲೆಗಳನ್ನು ಪ್ರತಿನಿಧಿಸುತ್ತದೆ. 3 ಮಧ್ಯಭಾರತದಲ್ಲಿ ಮೇಲಣ ಆರ್ಷೇಯಕಲ್ಪದ ಶಿಲಾವರ್ಗ ಮಾತ್ರ ಪ್ರಮುಖವಾಗಿ ಪ್ರಸರಿಸಿದೆ 4 ಸಿಂಘಭೂಮ್ ಮತ್ತು ಒರಿಸ್ಸಾ ಪ್ರಾಂತಗಳು ಕೆಳಗಣ ಮತ್ತು ಮಧ್ಯಮ ಆರ್ಷೇಯ ಶಿಲಾ ಸಮುದಾಯಗಳಿಂದ ಕೂಡಿವೆ. 5 ಆರಾವಳಿ ಪರ್ವತಸ್ತೋಮ ಮತ್ತು ಬುಂಡೇಲ್‍ಖಂಡ್ ಪ್ರಾಂತ್ಯಗಳಲ್ಲಿ ಕೆಳಗಣ ಮತ್ತು ಮೇಲಣ ಆರ್ಷೇಯಕಲ್ಪದ ಶಿಲೆಗಳು ಪ್ರಮುಖವಾಗಿ ಹರಡಿದ್ದು ಮಧ್ಯಮ ವರ್ಗದ ಶಿಲೆಗಳು ರೂಪುಗೊಂಡಿಲ್ಲ. ಧಾರವಾಡ ಭೂಭಾಗದಲ್ಲಿ ಕೆಳಗಣ ಮಧ್ಯಮ ಮತ್ತು ಮೇಲಣ ಆರ್ಷೇಯ ಕಲ್ಪದ ಶಿಲೆಗಳು ಕ್ರಮವಾಗಿರುವಂತೆ ಪ್ರಾಯಶಃ ಪ್ರಪಂಚದ ಯಾವ ಭಾಗದಲ್ಲಿಯೂ ರೂಪುಗೊಂಡಿಲ್ಲ. ಭೂಮಂಡಲ ಉಗಮವಾದಾಗ ಮೊದಲ ಬಾರಿಗೆ ಉಂಟಾದ ಭೂತೊಗಟೆಯ ಸಂಶೋಧನೆಗೆ ಧಾರವಾಡ ಭಾಗದ ಆರ್ಷೇಯ ಶಿಲೆಗಳು ಅತ್ಯುತ್ತಮ ಸರಕಾಗಿವೆ.

ಆರ್ಷೇಯ ಕಾಲದ ಶಿಲೆಗಳು ಸಂಪೂರ್ಣವಾಗಿ ನಿರ್ಜೀವ ಕಲ್ಪಕ್ಕೆ ಸೇರಿದ್ದು ಜೀವವಿಶೇಷರಹಿತವಾಗಿದೆ. ಅಧಿಕ ರೂಪಾಂತರ ಹೊಂದಿರುವ ಆರ್ಷೇಯ ಶಿಲೆಗಳು ಭೂವೈಜ್ಞಾನಿಕವಾಗಿ ಹೆಚ್ಚು ಕುತೂಹಲಕಾರಿಯಾದ ಖನಿಜ ಮತ್ತು ಅದುರು ನಿಕ್ಷೇಪಗಳನ್ನು ಯಥೇಚ್ಛವಾಗಿ ಹೊಂದಿವೆ. ಆರ್ಷೇಯ ಶಿಲೆಗಳು ಸುಮಾರು 3800-2500 ಮಿಲಿಯನ್ ವರ್ಷಗಳ ದೀರ್ಘಕಾಲ ತರಂಗವಾಗಿ ಎರಗಿದ ಭೂಚಲನೆ ಮತ್ತು ಪರ್ವತಜನ್ಯ ಚಲನೆಗಳಿಗೆ ತುತ್ತಾಗಿ ಅತ್ಯಂತ ವಿಭಿನ್ನ ರೀತಿಯ ಗುಣಗಳನ್ನೂ ರಚನೆಗಳನ್ನೂ ಪ್ರದರ್ಶಿಸುತ್ತವೆ. ಆದ್ದರಿಂದ ಆರ್ಷೇಯ ಶಿಲೆಗಳ ಉದ್ಭವ ಮತ್ತು ರಚನಾಕೃತಿಗಳ ನಿಕಟ ಸಂಬಂಧವನ್ನು ಸಂಪೂರ್ಣವಾಗಿ ಸಿದ್ಧಾಂತಮಾಡಿ ತೋರಿಸಲು ಇಲ್ಲಿಯ ತನಕವೂ

ಭಾರತದ ಶಿಲಾಸ್ತರ ವಿಭಾಗ
ಪ್ರಪಂಚದ ಮಾದರಿ ಶಿಲಾಸ್ತರ ವಿಭಾಗ ಯುಗಗಳು
ಐರೋಪ್ಯ ಕಲ್ಪಗಳು
ಕಾಲಾವಧಿ ಮಿಲಿಯನ್ ವರ್ಷಗಳು
ಶಿಲಾಸಮುದಾಯ ಪ್ರಮುಖವಾಗಿ ರೂಪುಗೊಂಡಿರುವ ಪ್ರದೇಶಗಳು

ಆ
ಈಚೆಗಿನ ಆಸ್ಟೊಸೀನ್
ಮಾನವಕಲ್ಪ
1
ಆಧುನಿಕ ಮೆಕ್ಕಲು ಸ್ತರಗಳು, ಮರಳು ದಿಬ್ಬಗಳು, ಮಣ್ಣುಗಳು, ಪುರಾತನ ಮೆಕ್ಕಲುಸ್ತರಗಳು, ಕಾಶ್ಮೀರದ ಕರೇವಾಗಳು, ಸಿಂದೂ-ಗಂಗಾ ನದಿಗಳ ಮೆಕ್ಕಲುಗಳು ಇತ್ಯಾದಿ 

ಮಯೊ-ಪ್ಲಿಯೊಸೀನ್
ಆಧುನಿಕ
13
ಸಿವಾಲಿಕ್, ಇರ್ರವಡ್ಡಿ ಮತ್ತು ಮಂಚ್ಚಾರ್ ಶಿಲಾಸ್ತೋಮಗಳು. ಕಡಲೂರು, ವರ್ಕಲಿ ಮತ್ತು ರಾಜಮಹೇಂದ್ರಿ ಮರಳು ಶಿಲೆಗಳು

ರ್ಯ
ಅಲಿಗೊ-ಮಯೊಸೀನ್
ಜೀವಿ
25-40
ನಾರಿ ಮತ್ತು ಗಜ್ ಶಿಲಾಸಮುದಾಯಗಳು. ಮರ್ರಿ ಮತ್ತು ಪೆಗು ಶಿಲಾ ಸಮುದಾಯಗಳು

ಇಯೊಸೀನ್
ಕಲ್ಪ
60
ರಾಣಿಕಟ್-ಲಾಕಿ-ಕೀರ್ತಾರ್ ಹಾಗೂ ಚಾರಟ್ ಶಿಲಾ ಸಮುದಾಯಗಳು

ಕ
ಕೆಳಗಣ-ಇಯೊಸೀನ್ ಮೇಲಣ 
ಮಧ್ಯೆ
110
ದಖನ್ ಪ್ರಸ್ಥಭೂಮಿ (ಜ್ವಾಲಾಮುಖಿ ಶಿಲೆಗಳು) ಅಂತಸ್ತರ ಶಿಲೆಗಳು

ಕ್ರಿಟೇಷಸ್
ಕ್ರಿಟೇಷಸ್ ಜ್ಯುರಾಸಿಕ್

ಜೀವಿ

150

ತಿರುಚ್ಚಿರಾಪಲ್ಲಿ ಅಸ್ಸಾಮ್ ನರ್ಮದಾಕಣಿವೆ. ಗುಯ್ಮಲ್ ಮತ್ತು ಚಿಕ್ಕಿಮ್, ಶಿಲಾಸಮುದಾಯಗಳು ಉಮಿಯ ಶಿಲಾಸ್ತರಗಳು

ಟ್ರಿಯಾಸಿಕ್
ಕಲ್ಪ
180
ಕಿಯೋಟೊ ಸುಣ್ಣಶಿಲೆ, ಸ್ಟಿಟಿಜೇಡು ಶಿಲೆ, ಕೋಟಾ ರಾಜಮಹಲ್ ಜಬ್ಬಲ್‍ಪುರ ಶಿಲಾಸಮುದಾಯಗಳು, ಕಚ್ ಶಿಲಾಸ್ತೋಮ

ಲ್ಪ
ಪರ್ಮಿಯನ್
ಕಾರ್ಬಾನಿಪೆರಸ್
ಪ್ರಾಚೀನ
215
275
ಲೀಲ್ಯಾಂಗ್ ಸಮುದಾಯ (ಕ್ರಿಯೋಟೋ ಸುಣ್ಣ ಶಿಲೆಯೊಡನೆ) ಮಹದೇವ ಮತ್ತು ಪಾಂಚೆತ್ ಸಮುದಾಯಗಳು

ಡೆವೋನಿಯನ್ ಸೈಲೂಪೆರಿಯನ್ 
ಜೀವಿ
325
ಮತ್‍ಕ್ವಾಟ್ರ್ಜೈಟ್ ಸಮುದಾಯ ಸ್ಪಿಟಿ ಮತ್ತು ಕಾಶ್ಮೀರದ ಸೈಲ್ಯೂರಿಯನ್ 

360
ಶಿಲಾಸ್ತರಗಳು; ಹಿಮಾಲಯ ಮತ್ತು ಬರ್ಮಾ ಸೈಲ್ಯೂರಿಯನ್ ಶಿಲಾಸ್ತರಗಳು 

ದ್ರಾವಿಡ
ಅರ್ಡೊವೀಷಿಯನ್

420
ಮಧ್ಯೆಹಿಮಾಲಯ ಸ್ಪಿಟಿ ಮತ್ತು ಕಾಶ್ಮೀರದ ಆರ್ಡೊವೀಷಿಯನ್ ಶಿಲಾಸ್ತರಗಳು

ಕಲ್ಪ
ಕೇಂಬ್ರಿಯನ್ 
ಕಲ್ಪ
520
ಹೈಮಂತ ಮತ್ತು ಗಾಬ್ರ್ಯಾಂಗ್ ಸಮುದಾಯಗಳು ಮಧ್ಯಹಿಮಾಲಯ ಮತ್ತು ಈಶಾನ್ಯ ಕಾಶ್ಮೀರ ಕೇಂಬ್ರೀಯನ್ ಶಿಲಾಸ್ತರಗಳು

ಪುರಾಣಕಲ್ಪ
ಪ್ರೀಕೆಂಬ್ರಿಯನ್
ಆದಿಜೀವಿ
1500
ಕಡಪ, ವಿಂಧ್ಯನ್ ಮತ್ತು ಮಾರ್ವೋಲಿ ಸಮುದಾಯಗಳು; ಡೋಗ್ರಾ ಮತ್ತು ಸಿಮ್ಲಾ ಸೇಟುಗಳು

ವೈದಿಕ ಅಥವಾ ಆರ್ಷೇಯಕಲ್ಪ
ಆರ್ಕೇಯನ್
ನಿರ್ಜಿವಿ ಕಲ್ಪ
4000
ಧಾರವಾಡ ಮತ್ತು ಆರಾವಳಿ ಶಿಲಾಸಮೂಹಗಳು, ಸಲ್ಕಲಾ ಜುಟೋಫ್ ಮತ್ತು ಡಾಲಿಂಗ್ ಶಿಲಾಸಮುದಾಯಗಳು; ಅನೇಕ ತರಹದ ಶಿಸ್ಟ್ ಮತ್ತು ನೈಸ್‍ಗಳು

ಸಾಧ್ಯವಾಗಿಲ್ಲ. ಧಾರವಾಡ ಶಿಲಾಸಮೂಹ: ಸರಿಸುಮಾರು ಆರ್ಷೇಯ ಕಲ್ಪದ ನೈಸ್, ಶಿಸ್ಟ್ ಮತ್ತು ಗ್ರಾನೈಟುಗಳು, ಅವುಗಳಿಗೂ ಹಿಂದೆ ಭೂತೊಗಟೆ ರೂಪುಗೊಂಡಾಗ ಉಂಟಾದ ಶಿಲೆಗಳು ಮತ್ತು ಮೊತ್ತಮೊದಲಿಗೆ ಜನಿಸಿ ರೂಪಾಂತರಗೊಂಡ ಜಲಶಿಲೆಗಳನ್ನು ಭಾರತದ ಶಿಲಾಚರಿತ್ರೆಯಲ್ಲಿ ಧಾರವಾಡ ಶಿಲಾಸಮೂಹವೆಂದು ವಿಶೇಷವಾಗಿ ಕರೆಯಲಾಗಿದೆ. ಇದು ಹರಡಿರುವ ಮುಖ್ಯಪ್ರದೇಶಗಳೆಂದರೆ ಮಾದರಿ ಪ್ರದೇಶವಾದ ಧಾರವಾಡ, ದಕ್ಷಿಣ ಕರ್ನಾಟಕ, ಛೋಟಾ ನಾಗಪುರ ಜಬ್ಬಲ್ಪುರ, ರೇವಾ, ಹಜಾರಿಬಾಗ್, ಷಿಲ್ಲಾಂಗ್ ಪ್ರಸ್ಥಭೂಮಿ, ರಾಜಸ್ಥಾನದ ಜೈಪುರ ಮತ್ತು ಅರಾವಳಿ ಪರ್ವತಪ್ರದೇಶ. ಧಾರವಾಡ ಶಿಲೆಗಳು ಮಧ್ಯ ಮತ್ತು ಉತ್ತರ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಹಬ್ಬಿವೆ. ಮುಖ್ಯವಾಗಿ ಧಾರವಾಡ ಶಿಲಾಸಮೂಹದಲ್ಲಿಯ ಶಿಲೆಗಳೆಂದದರೆ ಜ್ವಾಲಾಮುಖಿಯ ಆಮ್ಲ ಮತ್ತು ಪ್ರತ್ಯಾಮ್ಲ ಶಿಲಾರಸದಿಂದಾದ ಶಿಲೆಗಳು, ಜ್ವಾಲಾಮುಖಿಯ ಕಿಟ್ಟ ಮತ್ತು ದೂಳಿನಿಂದುಂಟಾದ ಶಿಲೆಗಳು, ಸ್ಛಟಕೀಕರಣಗೊಂಡು ಹರಳು ಹೊಂದಿರುವ ರೂಪಾಂತರ ಶಿಲೆಗಳು, ನೈಸ್ ಶಿಸ್ಟ್ ಗ್ರಾನೈಟುಗಳು, ಕಯನೈಟ್ ಗ್ರಾಫೈಟ್ ಗಾರ್ನೆಟ್ ಮತ್ತು ಕುರಂದ ಖನಿಜಗಳನ್ನೊಳಗೊಂಡ ಶಿಸ್ಟುಗಳು, ರೂಪಾಂತರಗೊಂಡ ಪೆಂಟಿಶಿಲೆ ಸುಣ್ಣಶಿಲೆ ಫಿಲ್ಲೈಟ್ ಮತ್ತು ಅಂತಸ್ಸರಣಗೊಂಡ ಆಮ್ಲ, ಪ್ರತ್ಯಾಮ್ಲ ಮತ್ತು ಮಹಾಪ್ರತ್ಯಾಮ್ಲದಿಂದ ಕೂಡಿದ ಅಗ್ನಿಶಿಲೆಗಳು.

ರಾಬರ್ಟ್ ಬ್ರೂಸ್‍ಫೂಟ್ 1886ರಲ್ಲಿ ಈ ಶಿಲಾಸಮೂಹದ ಅಧ್ಯಯನ ನಡೆಸಿ ಇದನ್ನು ಧಾರವಾಡ ಶಿಲಾವರ್ಗವೆಂದು ಹೆಸರಿಸಿದರು. ಮೈಸೂರು ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದ ಡಬ್ಲ್ಯು. ಎಫ್. ಸ್ಮಿತ್ 1916ರಲ್ಲಿ ಧಾರವಾಡ ಶಿಲೆಗಳ ಮಾದರಿಪ್ರದೇಶವಾದ ಆಗಿನ ಮೈಸೂರು ನಾಡಿನ ಭೂನಕಾಶೆÉಯನ್ನು ಪ್ರಕಟಿಸಿದರು. ಖಚಿತ ಭೂವಿವರಗಳಿಗೂ ಉತ್ತಮ ತಯಾರಿಕೆಗೂ ಇದು ಪ್ರಪಂಚದಲ್ಲೇ ಅದ್ವಿತೀಯವೆನಿಸಿದೆ. ವಿಧವಿಧವಾದ ಶಿಲೆಗಳು ಪ್ರಸರಿಸಿರುತೆ ಪ್ರದೇಶವನ್ನು ಭೂನಕಾಶೆಯಲ್ಲಿ ನಿಖರವಾಗಿ ಗುರ್ತಿಸಿರುವ ಜಾಗಗಳು ಇಂದಿಗೂ ಬದಲಾಗದೆ ಉಳಿದು ಮೈಸೂರು ಭೂವಿಜ್ಞಾನಿಗಳ ಜ್ಞಾನಪ್ರಖರವಯನ್ನು ಸಾರುತ್ತಿದೆ.

ರಾಜಸ್ಥಾನ ಪ್ರಾಂತ್ಯದಲ್ಲಿ ಹಬ್ಬಿರುವ ಧಾರವಾಡ ಶಿಲೆಗಳಿಗೆ ಆರಾವಳಿ ಶಿಲಾ ಸಮುದಾಯವೆಂದು ಹೆಸರು. ಈ ಪರ್ವತಗಳು ಭಾರತದ ಅತಿ ಪ್ರಾಚೀನ ಪರ್ವತಶ್ರೇಣಿ. ದಕ್ಷಿಣ ಗುಜರಾತ್ ಪ್ರಾಂತ್ಯದ ಬರೋಡ ಪ್ರದೇಶದಲ್ಲಿ ಹರಡಿರುವ ಆರಾವಳಿ ಶಿಲಾವರ್ಗವನ್ನು ಛಾಂಪನೀರ್ ಸಮುದಾಯವೆಂದು ಕರೆಯುತ್ತಾರೆ. ಮಧ್ಯಪ್ರದೇಶದಲ್ಲಿ ಧಾರವಾಡ ಶಿಲಾಸಮೂಹ ಭಾರಿ ಪ್ರಮಾಣದಲ್ಲಿ ಹರಡಿ ಲೋಹ, ಖನಿಜ ಮತ್ತು ಅದುರುಗಳ ನಿಕ್ಷೇಪಗಳನ್ನೊಳಗೊಂಡು ಬಿಹಾರ್ ಪ್ರಾಂತ್ಯಕ್ಕೆ ಮುಂದುವರಿದಿರುತ್ತದೆ. ನಾಗಪುರ ಮತ್ತು ಅಕ್ಕಪಕ್ಕ ಪ್ರದೇಶಗಳಲ್ಲಿ ಗ್ರಾನ್ಯುಲೈಟ್ ಹಂತದ ಅಧಿಕ ರೂಪಾಂತರಗೊಂಡಿರುವ ಶಿಲೆಗಳು ಸಾಸರ್ ಸಮುದಾಯಕ್ಕೆ ಸೇರಿದವೆಂದೂ ಅವುಗಳ ಅನಂತರ ಹಬ್ಬಿರುವ ಕ್ಲೋರೈಟ್ ಪದರುಶಿಲೆ, ಜಾಸ್ಪರ್ ಪೆಂಟೆಶಿಲೆ ಮತ್ತು ಅಧಿಕ ಕಬ್ಬಿಣಾಂಶವುಳ್ಳ ಬೆಣಚು ಶಿಲೆಗಳು ಸಕೋರಿ ಸಮುದಾಯಕ್ಕೆ ಸೇರಿದವೆಂದೂ ಪರಿಗಣಿಸಲಾಗಿದೆ. ಬಾಲಘಾಟ್ ಮತ್ತು ನಾಗಪುರ ಜಿಲ್ಲೆಗಳಲ್ಲಿ ಆಧಿಕ ಮ್ಯಾಂಗನೀಸ್ ಮತ್ತು ಕಬ್ಬಿಣಾಂಶಗಳಿಂದ ಕೂಡಿದ ಅಮೃತಶಿಲೆಗಳನ್ನು ಗೊಂಡೈಟ್ ಶಿಲಾಸಮುದಾಯವೆಂದು ಕರೆಯಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಅಧಿಕ ಮ್ಯಾಂಗನೀಸ್ ಅಂಶವುಳ್ಳ ರೂಪಾಂತರ ಶಿಲೆಗಳಿಗೆ ಕೋಡುರೈಟ್ ಶಿಲಾಸಮುದಾಯ ಎಂಬ ಹೆಸರಿದೆ.

ಸಿಂಘಭೂಮ್ ಮತ್ತು ಒರಿಸ್ಸಾ ಪ್ರಾಂತ್ಯಗಳಲ್ಲಿಯ ಧಾರವಾಡ ಶಿಲಾ ಸಮೂಹಗಳಲ್ಲಿ ಹೆಸರಾಂತ ಮೈಕಾ ಗಣಿಗಳಿವೆ. ಬಿಹಾರಿನ ದಕ್ಷಣಭಾಗ ಗಾಂಗ್‍ಪುರ ಮತ್ತು ಮಯೂರ್‍ಭಂಜ್ ಪ್ರದೇಶಗಳ ಶಿಲೆಗಳಲ್ಲಿ ಮಹಾಪೂರವಾಗಿ ಸಂಚಯನಗೊಂಡ ಕಬ್ಬಿಣ ಅದುರು ಇರುವುದರಿಂದ ಇವನ್ನು ಕಬ್ಬಿಣ ಅದುರು ಸಮುದಾಯವೆಂದು ಕರೆಯುತ್ತಾರೆ. ಪೂರ್ವಘಟ್ಟಗಳಲ್ಲಿ ಸಿಲ್ಲಿಮನೈಟ್ ಮತ್ತು ಗ್ರಾಫೈಟ್ ಪದರುಶಿಲೆಗಳನ್ನು ಹೊಂದಿರುವ ಧಾರವಾಡ ಶಿಲಾಸಮೂಹವನ್ನು ಬೋಂಡಲೈಟ್ ಸಮುದಾಯ ಎನ್ನುತ್ತಾರೆ. ಉತ್ತರ ಭಾರತದ ಕಾಶ್ಮೀರ ಪ್ರಾಂತ್ಯದಲ್ಲಿರುವ ಧಾರವಾಡ ಶಿಲೆಗಳನ್ನು ಸಲ್ಖಲ ಸಮುದಾಯವೆಂದೂ ಘರ್ಹ್‍ವಾಲ್‍ನಲ್ಲಿರುವ ಶಿಲೆಗಳನ್ನು ವೈಕ್ರೀತ ಸಮುದಾಯವೆಂದೂ ನೇಪಾಳದಲ್ಲಿರುವ ಶಿಲೆಗಳನ್ನು ಜುಟೋಘ್ ಸಮುದಾಯವೆಂದೂ ಸಿಕ್ಕಿಮಿನಲ್ಲಿರುವ ಶಿಲೆಗಳನ್ನು ಡಾಲಿಂಗ್ ಸಮುದಾಯವೆಂದೂ ಹೆಸರಿಸಲಾಗಿದೆ.

ಆರ್ಷೇಯ ಶಿಲೆಗಳ ರಚನೆ: ಭಾರತದ ಅರ್ಷೇಯ ಶಿಲಾಸಮೂಹಗಳನ್ನು ಶಿಲೆಗಳ ರಚನೆಯ ಓಟದ ಮತ್ತು ಪರ್ವತಜನ್ಯ ಚಲನೆಗಳ ಸಾಮ್ಯದ ಮೇರೆಗೆ ನಾಲ್ಕು ಉಪಭಾಗಗಳಾಗಿ ವಿಂಗಡಿಸಿದೆ: 1 ಧಾರವಾಡ ಶಿಲಾಮಡಿಕೆಗಳು, 2 ಪೂರ್ವಘಟ್ಟ ಮಡಿಕೆಗಳು 3 ಆರಾವಳಿ ಮಡಿಕೆಗಳು. 4 ಸಾತ್ಪುರ ಮಡಿಕೆಗಳು. ಈ ಶಿಲಾಸಮೂಹಗಳ ಮುಖ್ಯ ರಚನೆ ದೀರ್ಘ ಓರೆಯುಳ್ಳ ಒಂದೇ ಮಗ್ಗುಲಿಗೆ ಮಡಿಚಿಕೊಂಡಿರುವ ಶಿಲೆಗಳು. ಮಡಿಕೆಗಳ ಅಕ್ಷಿ ಉತ್ತರ-ವಾಯುವ್ಯ-ದಕ್ಷಿಣ-ಆಗ್ನೇಯ ಓಟದಲ್ಲಿದ್ದು ಅನಂತರದ ಭೂಚಲನೆ ಮತ್ತು ಪರ್ವತಜನ್ಯ ಚಲನೆಗಳಿಂದ ಪುನಃ ಪುನಃ ಮಡಿಚಲ್ಪಟ್ಟಿದೆ. ಮಡಿಕೆಗಳಾಗುವಾಗ ಭೂಮಿಯೊಳಗಿನಿಂದ ಶಿಲಾಪಾಕ ನುಗ್ಗಿ ಬಂದು ಅಂತಸ್ತರಗಳಾಗಿ ಸೇರಿ ಮಿಶ್ರಣ ಶಿಲೆಗಳುಂಟಾಗಿವೆ. ಆದ್ದರಿಂದ ಆರ್ಷೇಯಕಲ್ಪದ ಅಂತ್ಯದ ವೇಳೆಗೆ ಶಿಲೆಗಳು ಅತ್ಯಂತ ತೊಡಕಿನ ರಚನಾವಿನ್ಯಾಸಗಳನ್ನು ಹೊಂದಿ ಜೊತೆಯಲ್ಲಿ ಉಚ್ಚಹಂತದ ರೂಪಾಂತರವನ್ನೂ ಪಡೆದಿವೆ. ದಕ್ಷಿಣ ಭಾರತದ ಶಿಲಾಚರಿತ್ರೆಯಲ್ಲಿ ಆರ್ಷೇಯಕಲ್ಪ ಅಂತ್ಯವಾದ ಮೇಲೆ ಮಹತ್ತರವಾದ ಭೂವಿರಾಮ (ಶಿಲಾಸಂಚಯನವಿಲ್ಲದೆ) ಇರುವುದು ಈಪಾರ್ಕೇಯನ್ ಮಹಾ ಅನನುರೂಪ್ಯತೆಯಿಂದ ಗುರುತಿಸಲ್ಪಟ್ಟಿದೆ.

ಧಾರವಾಡ ಶಿಲಾಸಮೂಹದ ಆರ್ಥಿಕ ಪ್ರಾಮುಖ್ಯ: ಧಾರವಾಡ ಶಿಲಾಸಮೂಹದಲ್ಲಿ ಚಿನ್ನ, ಮ್ಯಾಂಗನೀಸ್, ಕಬ್ಬಿಣ, ಕ್ರೋಮಿಯಮ್, ತಾಮ್ರ, ಬೆರೆಲ್ಲಿಯಮ್, ಯುರೇನಿಯಮ್, ತೋರಿಯಮ್, ಟೈಟೇನಿಯಮ್ ಮುಂತಾದ ಲೋಹಗಳ ಅದುರು ನಿಕ್ಷೇಪಗಳಿವೆ. ಕೈಗಾರಿಕೆಗೆ ಅವಶ್ಯವಾದ ಮೈಕಾ, ಕುರಂಗ, ಗ್ರಾಫೈಟ್, ರತ್ನ ಮತ್ತು ವಜ್ರ, ರತ್ನದಕಲ್ಲುಗಳು, ಇಲ್ಮೆನೈಟ್, ಕಯನೈಟ್, ಕೊಲಂಬೈಟ್ ಮುಂತಾದ ಖನಿಜಗಳ ಗಣಿಗಳಿಂದ ಸರ್ಕಾರಕ್ಕೆ ವರ್ಷಂಪ್ರತಿ ಕೋಟ್ಯಂತರ ರೂಪಾಯಿಗಳ ಆದಾಯವಿದೆ. ಭವ್ಯ ಭವನಗಳನ್ನು ಕಟ್ಟಲು ಉಪಯೋಗಿಸುವ ಶಿಲೆಗಳು ಗ್ರಾನೈಟ್, ಅಮೃತಶಿಲೆ, ಡಾಲರೈಟ್ ಮುಂತಾದವು ಯಥೇಚ್ಛವಾಗಿವೆ. ಮಲಬಾರ್ ಮತ್ತು ಕೋರಮಂಡಲ ತೀರಗಳಲ್ಲಿ ದೊರೆಯುವ ಅಧಿಕ ಸಾಂದ್ರತೆಯುಳ್ಳ ಮೊನಜೈಟ್, ರೂಟೈಲ್, ಜಿರ್ಕಾನ್, ಇಲ್ಮನೈಟ್ ಮುಂತಾದ ಭಾರಖನಿಜಗಳಿಗೆ ಮೂಲಶಿಲೆಗಳೂ ಧಾರವಾಡ ಶಿಲಾ ಸಮೂಹವೇ.
(ii) ಪುರಾಣ ಕಲ್ಪ: ಅರ್ಷೇಯ ಕಲ್ಪಾನಂತರ ಭಾರತದ ಶಿಲಾಚರಿತ್ರೆಯಲ್ಲಿ ಶಿಲೆಗಳಿಂದ ದಾಖಲಾಗದ ಸುಮಾರು 900 ಮಿಲಿಯನ್ ವರ್ಷಗಳ ದೀರ್ಘ ಕಾಲಾವಧಿ ಸಾಗಿದೆ. ಈಪಾರ್ಕೆಯನ್ ಮಹಾ ಅನನುರೂಪ್ಯತೆಯಿಂದ ನಮೂದಿಸಲ್ಪಟ್ಟಿರುವ ಈ ಪರ್ವಕಾಲದಲ್ಲಿ ಧಾರವಾಡ ಶಿಲಾಸಮೂಹಗಳು ಭೂಚಲನೆ ಮತ್ತು ಪರ್ವತಜನ್ಯ ಚಲನೆಗಳಿಂದ ಮಡಿಕೆಗಳಾಗಿ ಮುದುಡಿ, ನಾನಾ ವಿನ್ಯಾಸಗಳ ಪರ್ವತಗಳಾಗಿ ಬೆಳೆದು, ಅನಂತರ ಸವೆತಗೊಂಡು ಅವುಗಳ ತಳಮಟ್ಟ ತಲಪಿದುವು. ಹೀಗೆ ಅನನ್ಯ ರೀತಿಯಲ್ಲಿ ಸವೆದ ಧಾರವಾಡ ಶಿಲಾ ಸಮೂಹದ ಸವಕಲ ಏಣುಗಳ ಮೇಲೆ ಪುರಾಣಕಲ್ಪದ ಶಿಲಾ ಸಮುದಾಯಗಳು ಅನನುರೂಪ್ಯತೆಯಿಂದ ಮುಂದಿನ ಪೀಳಿಗೆಯ ಶಿಲಾಸ್ತೋಮಗಳಿಗಗೆ ಅಡಿಪಾಯದ ತೆರನಾಗಿ ನಿಕ್ಷೇಪಗೊಂಡವು. ದಕ್ಷಿಣಭಾರತದಲ್ಲಿ ಈಪಾರ್ಕೆಯನ್ ಮಹಾ ಅನನುರೂಪ್ಯತೆ ವಿಪರೀತವಾಗಿ ವಿರೂಪಗೊಂಡ ಮತ್ತು ರೂಪಾಂತರಗೊಂಡ ಆರ್ಷೇಯ ಶಿಲೆಗಳನ್ನೂ ಅಲ್ಪ ಪ್ರಮಾಣದಲ್ಲಿ ರಚನಾ ವ್ಯತ್ಯಾಸ ಮತ್ತು ರೂಪಾಂತರಗೊಂಡ ಪುರಾಣಕಲ್ಪದ ಜಲಜ ಶಿಲೆಗಳನ್ನೂ ಪ್ರತ್ಯೇಕಗೊಳಿಸುತ್ತದೆ.
ವಯೋಸ್ತರಾನುಕ್ರಮಣಿಕೆಯ ಪ್ರಕಾರ ಪುರಾಣಕಲ್ಪದ ಶಿಲೆಗಳು ಸುಮಾರು 2500 ಮಿಲಿಯನ್ ವರ್ಷಗಳ ಹಿಂದೆ ಆರಂಭಗೊಂಡು ಸುಮಾರು 570 ಮಿಲಿಯನ್ ವರ್ಷಗಳ ಹಿಂದೆ ಕೇಂಬ್ರಿಯನ್ ಯುಗದ ಶಿಲೆಗಳು ಅನನುರೂಪ್ಯತೆಯಿಂದ ಇವುಗಳ ಮೇಲೆ ಸಂಚಯನಗೊಂಡಾಗ ಸಮಾಪ್ತಿಯಾದಂತೆ ಸೂಚಿತವಾಗುತ್ತವೆ. ಭಾರತ ಪರ್ಯಾಯದ್ವೀಪದಲ್ಲಿ ಪುರಾಣಕಲ್ಪದ ಶಿಲೆಗಳು ಪ್ರಸರಿಸಿರುವ ಭೂಭಾಗಗಳನ್ನು ಈ ಕೆಳಗಣ ಪಟ್ಟಿಯಲ್ಲಿ ಕೊಟ್ಟಿದೆ:

ಮುಖ್ಯ ಭಾಗಗಳು
ದಕ್ಷಿಣ ಪರ್ಯಾಯ ದ್ವೀಪ
ಉತ್ತರ ಪರ್ಯಾಯ ದ್ವೀಪ

ಮೇಲಣ
ಪುರಾಣ 
ಕಲ್ಪ
ಕರ್ನೂಲು ಶಿಲಾ ಸಮುದಾಯ ಭೀಮ ಸಮುದಾಯ, ಸುಲ್ಲವಾಯ್ ಸಮುದಾಯ, ಇಂದ್ರಾವತಿ ಸಮುದಾಯ, ಛಟ್ಟೀಶಗರ್ ಸಮುದಾಯ 
ಮೇಲಣ ವಿಂಧ್ಯಾ 
ಸಮುದಾಯ
ಮಲಾನಿ ಜ್ವಾಲಾಮುಖಿ ಶಿಲೆಗಳು

ಅನನುರೂಪ್ಯತೆ

ಕೆಳಗಣ
ಪುರಾಣ 
ಕಲ್ಪ
ಕಡಪ ಮಹಾಶಿಲಾ ಸಮುದಾಯ
ಕಲಾದಗಿ ಸಮುದಾಯ
ಪಾಖಾಲ್ ಸಮುದಾಯ
ಕೆಳಗಣ ವಿಂಧ್ಯಾ ಸಮುದಾಯ, ಗ್ವಾಲಿಯರ್ ಸಮುದಾಯ ಬಿಜಾವರ
ಸಮುದಾಯ, ಕೊಲ್ಹಾನ್ ಸಮುದಾಯ, ದೆಹಲಿ ಮಹಾಶಿಲಾ ಸಮುದಾಯ

ಪುರಾಣಕಲ್ಪದ ಮುಖ್ಯ ಶಿಲೆಗಳು ಕ್ವಾಟ್ರ್ಜೈಟ್, ಮರಳು ಶಿಲೆ, ಸ್ಲೇಟು, ಜೇಡುಶಿಲೆ, ಸುಣ್ಣಕಲ್ಲು, ಡಾಲೊಮೈಟ್ ಮುಂತಾದವು. ಸುಲಭವಾಗಿ ಗುರುತಿಸಬಹುದಾದಂಥ ಜೀವ್ಯವಶೇಷಗಳು ಪುರಾಣಕಲ್ಪದ ಶಿಲೆಗಳಲ್ಲಿ ಈ ತನಕ ದೊರೆತಿಲ್ಲ. ಶೈವಾಲಗಳನ್ನು ಅನುಕರಿಸುವ ಸ್ಟ್ರೊಮೆಟೊಲೈಟಿಗಳು ಮತ್ತು ಸಸ್ಯಕಣಗಳೆಂದು ಶಂಕಿಸಿರುವ ಪದಾರ್ಥಗಳು ಈ ಶಿಲೆಗಳಲ್ಲಿ ಅಡಗಿವೆ ಎಂದು ಇತ್ತೀಚಿನ ಕೆಲವು ಸಂಶೋಧನಾ ಪ್ರಕಟಣೆಗಳು ಹೇಳಿವೆ.

ಪುರಾಣಕಲ್ಪದ ಶಿಲೆಗಳಲ್ಲೆಲ್ಲ ಕಡಪ ಮಹಾಶಿಲಾಸಮುದಾಯ ಹೆಚ್ಚು ರಚನಾ ವ್ಯತ್ಯಾಸಗಳನ್ನು ರೂಪಾಂತರವನ್ನೂ ಹೊಂದಿದೆ. ಸುಮಾರು 200 ಕಿಮೀ ಉದ್ದ ಮತ್ತು 140 ಕಿಮೀ ಅಗಲವಿರುವ ಕಡಪ ಮಹಾಬೋಗುಣಿ ಪೂರ್ವ ಭಾಗದಲ್ಲಿ ಕೋರಮಂಡಲ ತೀರದ ಸಮಾಂತರ ಆಕೃತಿ ಹೊಂದಿದೆ. ಅನನುರೂಪ್ಯತೆಗಳ ಮೇರೆಗೆ ಕಡಪ ಶಿಲಾಸಮುದಾಯವನ್ನು ಪಾಪಾಗ್ನಿ, ಚೆಯ್ಯಾರ್, ನಲ್ಲಮಲೈ ಮತ್ತು ಕೃಷ್ಣಾ ಸಮುದಾಯಗಳೆಂದು ನಾಲ್ಕು ಭಾಗಗಳಾಗಿ ವಿಂಗಡಿಸಿದೆ. ಪಾಪಾಗ್ನಿ ಸಮುದಾಯದಲ್ಲಿ ಜ್ವಾಲಾಮುಖಿ ಶಿಲೆಗಳು ದಪ್ಪವಾದ ಸ್ತರಗಳಂತೆ ಅಂತಸ್ಸರಣಗೊಂಡಿವೆ. ಶಿಲಾರಚನೆಯಲ್ಲಿ ಕಡಪ ಮಹಾಬೋಗುಣಿಯ ಪೂರ್ವಭಾಗದ ಶಿಲೆಗಳು ಭೂಚಲನೆಗಳಿಂದ ಅನೇಕ ತೆರನಾದ ಮಡಿಕೆಗಳಾಗಿ ಮುದುಡಿ, ಹಲವಾರು ಸ್ಥಳಗಳಲ್ಲಿ ಸ್ತರಭಂಗಗೊಂಡಿವೆ. ಆದರೆ ಬೋಗುಣಿಯ ಪಶ್ಚಿಮ ಭಾಗದಲ್ಲಿಯ ಶಿಲೆಗಳು ಈ ತೆರನಾದ ಭೂಕ್ಷೋಭೆಗೆ ಒಳಗಾಗಿಲ್ಲ.

ಕರ್ನಾಟಕದ ಬಿಜಾಪುರ ಮತ್ತು ಬೆಳಗಾಂವಿ ಜಿಲ್ಲೆಗಳಲ್ಲಿ ಕಡಪ ಶಿಲಾಸಮುದಾಯದ ಸಮಾನ ವಯಸ್ಸಿನ ಕಲಾದಗಿ ಸಮುದಾಯ ಪೂರ್ವ-ಪಶ್ಚಿಮ ಸುಮಾರು 160 ಕಿಮೀ ಉದ್ದವಾಗಿಯೂ ಉತ್ತರ-ದಕ್ಷಿಣ 66 ಕಿಮೀ ಅಗಲವಾಗಿಯೂ ಪ್ರಸರಿಸಿದೆ. ಕಲಾದಗಿ ಸುತ್ತಮುತ್ತ ವ್ಯಾಪಕವಾಗಿ ರೂಪುಗೊಂಡಿರುವ ಶಿಲಾಸ್ತೋಮಗಳನ್ನು ಮೊದಲ ಬಾರಿಗೆ ಅಧ್ಯಯನ ನಡೆಸಿದ ರಾಬರ್ಟ್‍ಬ್ರೂಸ್‍ಫೂಟ್ 1876ರಲ್ಲಿ ಇವನ್ನೇ ಕಲಾದಗಿ ಸಮುದಾಯವೆಂದು ಹೆಸರಿಸಿದರು. ಅಂತಾರಾಷ್ಟ್ರೀಯ ಶಿಲಾಸ್ತರಾನುಕ್ರಮಣಿಕೆಯ ಪ್ರಕಾರ ಸಂಚಯನಾವರ್ತದ ಮೇರೆ 4500 ಮೀ ದಪ್ಪವುಳ್ಳ ಕಲಾದಗಿ ಸಮುದಾಯವನ್ನು ರಾಮದುರ್ಗ, ಸಾಲಾಪುರ, ಲೋಕಾಪುರ, ಮಲ್ಲಾಪುರ ಮತ್ತು ದಾದನಹಟ್ಟಿ ಶಿಲಾಸ್ತೋಮಗಳೆಂದು ಐದು ವಿಭಾಗಗಳಾಗಿ ವಿಭಾಗಿಸಿದೆ. ಲೋಕಾಪುರ ಶಿಲಾಸ್ತೋಮವಾದ ಡಾಲೊಮೈಟ್ ಶಿಲೆಗಳಲ್ಲಿ ಶೈವಾಲಗಳನ್ನು ಹೋಲುವ ಸ್ರೊಮೆಟೋಲೈಟ್ ಮತ್ತು ಓಂಕೊಲೈಟುಗಳ ಅವಶೇಷಗಳಿವೆ. ದಾದನಹಟ್ಟಿ ಶಿಲಾಸ್ತೋಮದ ಹೊಸಕೋಟೆ ಜೇಡುಶಿಲೆಗಳಲ್ಲಿ ಆರು ಡಾಲರೈಟ್ ಡೈಕುಗಳು ಅಂತಸ್ಸರಣಗೊಂಡಿವೆ. ಡೈಕುಗಳು ಅಂತಸ್ಸರಣಗೊಂಡಾಗ ಅವುಗಳ ಶಾಖದಿಂದ ಅಕ್ಕಪಕ್ಕದಲ್ಲಿ ಜೇಡುಶಿಲೆಗಳು ಅಲ್ಬೈಟ್ ಮತ್ತು ಹಾರ್ನ್‍ಫೆಲ್ಸ್ ಸ್ಲೇಟುಗಳಾಗಿ ರೂಪಾಂತರಗೊಂಡಿವೆ.

ಭೂಚಲನೆಗಳಿಂದ ಮೇಲೆತ್ತಲ್ಪಟ್ಟ ಕಲಾದಗಿ ಶಿಲಾಸಮುದಾಯ ಶಿಲಾರಚನೆಯಲ್ಲಿ ಎರಡು ಕಡೆಗೂ ಇಳಿಜಾರಿರುವ ಅನೇಕ ಸಮುಖಾವಲೋಕನ ಮತ್ತು ವಿಮೂಖಾವಲೋಕನ ಮಡಿಕೆಗಳನ್ನು ಹೊಂದಿದೆ. ಅನಂತರದ ಭೂಚಲನೆಗಳಿಂದ ಮೊದಲ ಮಡಿಕೆಗಳು ಅವುಗಳ ಅಕ್ಷಿಗಳ ಮೇಲೆ ಪುನಃ ಮಡಿಕೆಗಳನ್ನು ಹೊಂಡಿ ಅನಂಥರ ಮುದುಡಿವೆ. ಹಲವಾರು ಸ್ಥಳಗಳಲ್ಲಿ ಅಧಿಕ ಒತ್ತಡದಿಂದ ಸ್ತರಭಂಗಗಳಾಗಿವೆ. ಸ್ತರಭಂಗಗಳಾಗಿರುವ ಕೆಲವು ಪ್ರದೇಶಗಳಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದುರುಗಳ ನಿಕ್ಷೇಪಗಳಿವೆ. ಕಲಾದಗಿ, ಬಾಗಲಕೋಟೆ, ಲೋಕಾಪುರ ಮತ್ತು ಯಾದವಾಡಗಳ ಬಳಿ ಸಿಮೆಂಟ್ ಮತ್ತು ಉಕ್ಕು ತಯಾರಿಸಲು ಬಳಸುವ ಅಧಿಕ ಸುಣ್ಣಾಂಶದ ಸುಣ್ಣ ಕಲ್ಲು ವಿಶೇಷವಾಗಿ ರೂಪುಗೊಂಡಿವೆ. ದೇವರ ವಿಗ್ರಹಗಳನ್ನು ಕೆತ್ತುವ ಮೂರ್ತಿಶಿಲೆ ಚಿಕ್ಕಶೆಲ್ಲಿಕೇರಿಯ ಬಳಿ ದೊರೆಯುತ್ತದೆ.

ಗೋದಾವರಿ ನದಿ ಕಣಿವೆಯಲ್ಲಿ ಸಂಚಯನಗೊಂಡ ಕಲಾದಗಿ ಸಮುದಾಯಕ್ಕೆ ಸರಿಸಮಾನವಾದ ಪುರಾಣಕಲ್ಪದ ಜಲಜಶಿಲೆಗಳಿಗೆ ಪಾಖಾಲ್ ಸಮುದಾಯವೆಂದು ಹೆಸರು. ಇದು ಪಾಕಾಲ್ ಬೆಟ್ಟಗಳಲ್ಲಿ ವ್ಯಾಪಕವಾಗಿ ಹರಡಿರುವುದರಿಂದ ಈ ಹೆಸರು. ಇದರ ಗಾತ್ರ ಸುಮಾರು 7300 ಮೀ. ಇದರಲ್ಲಿ ಪೆಂಟಿಶಿಲೆ, ಗುಂಡುಗಳಿರುವ ಮರಳುಶಿಲೆ, ಮರಳೀನ ಅಂಶದ ಸುಣ್ಣಶಿಲೆ, ಜೇಡುಶಿಲೆ ಮತ್ತು ಸ್ಲೇಟುಗಳಿವೆ.

ದೆಹಲಿ ಶಿಲಾಸಮುದಾಯ ಕಡಪ ಮಹಾಶಿಲಾಸಮುದಾಯದ ಸಮಾನ ವಯಸ್ಸಿನದಾದರೂ ಅರಾವಳಿ ಪರ್ವತಜನ್ಯ ಚಲನೆಗಳಿಗೊಳಗಾದುದರಿಂದ ಹೆಚ್ಚಿನ ರಚನಾವ್ಯತ್ಯಾಸಗಳನ್ನು ತೋರಿಸುತ್ತದೆ. ಇದು ರಾಜಸ್ಥಾನದ ಈಶಾನ್ಯ ಭಾಗದಿಂದ ದೆಹಲಿಯವರೆಗೆ ಪ್ರಮುಖಬೆಟ್ಟದ ಸಾಲುಗಳಾಗಿ ಹಬ್ಬಿದೆ. ಇದಾರ್‍ನಿಂದ ದೆಹಲಿವರೆಗೆ ಪ್ರಸರಿಸಿರುವ ಶಿಲೆಗಳಿಗೆ ಅಲ್ವಾರ್ ಕ್ಸಾರ್ಟ್‍ಜೈಟುಗಳೆಂದು ಹೆಸರು. ದೆಹಲಿ ಶಿಲಾಸಮುದಾಯದೊಳಗೆ ಎರಿನ್‍ಪುರ ಗ್ರಾನೈಟ್ ಅಂತಸ್ಥ ಶಿಲೆ ಅಂತಸ್ಸರಣಗೊಂಡಿರುವುದರಿಂದ ಶಿಲೆಗಳು ಹೆಚ್ಚಾಗಿ ರೂಪಾಂತರಹೊಂದಿವೆ. ಸುಮಾರು 5100 ಮೀ ದಪ್ಪದ ಶಿಲಾಸಮುದಾಯದಲ್ಲಿ ಸುಣ್ಣಶಿಲೆ ಮತ್ತು ಕ್ವಾರ್ಟ್‍ಜೈಟುಗಳ ಜೊತೆ ಸ್ಲೇಟು. ಪದರಶಿಲೆ ಮತ್ತು ಹಾರ್ನ್‍ಸ್ಟೋನುಗಳು ಸೇರಿವೆ. ದೆಹಲಿ ಸಮುದಾಯ ಆರಾವಳಿ ಸಮುದಾಯದ ಮೇಲೆ ಅನನುರೂಪ್ಯತೆಯಿಂದ ಸಂಚಯನಗೊಂಡಿದ್ದರೂ ಇದರ ಮೇಲೆ ಸಂಚಯನಗೊಂಡಿರುವ ವಿಂಧ್ಯಾ ಸಮುದಾಯದೊಡನೆ ಅತಿ ಇಳಿಜಾರಿನ ಸ್ತರಭಂಗ ಸಂಬಂಧಹೊಂದಿದೆ.
ವಿಂಧ್ಯಾ ಶಿಲಾಸಮುದಾಯ ಸುಮಾರು 4,200 ಮೀ ದಪ್ಪವಿದ್ದು ಹೆಚ್ಚು ಭೂಕ್ಷೋಭೆಗೊಳಗಾಗದೆ ಸಮಸ್ತರವಾಗಿ ಕಡಪ ಕಾಲದ ಶಿಲೆಗಳ ಮೇಲೆ ಅನನುರೂಪ್ಯತೆಯಿಂದ ಸಂಚಯನಗೊಂಡಿದೆ. ಮಧ್ಯಪ್ರದೇಶದಲ್ಲಿ ವಿಶೇಷವಾಗಿ ಹರಡಿರುವ ಸ್ಲೇಟು, ಮರಳುಶಿಲೆಗಳನ್ನು ಕೆಳಗಣ ವಿಂಧ್ಯಾ ಸಮುದಾಯವೆಂದೂ ಇವುಗಳ ಮೇಲೆ ಪ್ರಮುಖವಾಗಿರುವ ಮರಳುಶಿಲೆ, ಮತ್ತು ಕೆಲವು ಜೇಡು ಶಿಲಾಸ್ತರಗಳನ್ನು ಮೇಲಣ ವಿಂಧ್ಯಾ ಸಮುದಾಯವೆಂದೂ ವಿಭಾಗಿಸಿದೆ. ರಾಜಸ್ಥಾನದ ಬಳಿ ಇರುವ ಕೆಳಗಣ ವಿಂಧ್ಯಾ ಸಮುದಾಯದೊಳಗೆ ಮಲಾನಿ ಆಮ್ಲೀಯ ಜ್ವಾಲಾಮುಖಿ ಶಿಲೆಗಳು ಅಂತಸ್ಸರಣಗೊಂಡಿವೆ. ಸನ್ ನದಿ ಕಣಿವೆಯಲ್ಲಿ ಸಂಚಯನಗೊಂಡಿರುವ ಕೆಳಗಣ ವಿಂಧ್ಯಾ ಶಿಲೆಗಳನ್ನು ಸೆಮ್ರಿ ಸಮುದಾಯ ಎಂದೂ ಭೀಮಾನದಿ ಕಣಿವೆಯಲ್ಲಿ ಸಂಚಯನಗೊಂಡಿರುವ ಇದೇ ಕಾಲದ ಶಿಲೆಗಳನ್ನು ಭೀಮಾ ಸಮುದಾಯ ಎಂದೂ ಹೆಸರಿಸಿದೆ. ನರ್ಮದಾನದಿ ಕಣಿವೆಯಲ್ಲಿ ಕಡಪ ಶಿಲೆಗಳ ಮೇಲೆ ಅನನುರೂಪ್ಯತೆಯಿಂದ ಸಂಚಯಿಸಿರುವ ಶಿಲೆಗಳಿಗೆ ಕರ್ನೂಲ್ ಸಮುದಾಯವೆಂದು ಹೆಸರು.

ಮೇಲಣ ವಿಂಧ್ಯಾ ಸಮುದಾಯವನ್ನು ಕೈಮೂರ್, ರೇವಾ ಮತ್ತು ಭಂಡೇರ್ ಶಿಲಾಸ್ತೋಮ ಎಂಬ ಮೂರು ಭಾಗಗಳಾಗಿ ವಿಂಗಡಿಸಿದೆ. ವಿಂಧ್ಯಾ ಸಮುದಾಯದಲ್ಲಿ ಲೋಹ ಮತ್ತು ಖನಿಜ ನಿಕ್ಷೇಪಗಳಿಲ್ಲದಿದ್ದರೂ ಇದು ಕಟ್ಟಡ ಶಿಲೆಗಳಿಗೆ ಖ್ಯಾತಿ ಪಡೆದಿದೆ. ಇದರಲ್ಲಿಯ ಪೆಂಟೆಶಿಲಾಸ್ತರ ಗೋಲ್ಕೊಂಡ ವಜ್ರಗಳಿಗೆ ತೌರುಮನೆ. ಹಿಮಾಲಯದಲ್ಲಿಯ ಪುರಾಣ ಕಲ್ಪದ ಶಿಲೆಗಳಲ್ಲಿ ಡೋಗ್ರಾ ಸ್ಲೇಟುಗಳು, ಸಿಮ್ಲಾ ಸ್ಲೇಟುಗಳು ಮತ್ತು ಪೂರ್ವ ಹಿಮಾಲಯದ ಡಾಲಿಂಗ್ ಸಮುದಾಯಗಳು ಮುಖ್ಯವಾದವು. ಈ ಕಾಲದಲ್ಲಿ ಆರಾವಳಿ ಪರ್ವತಗಳು ವಿಶೇಷವಾಗಿ ಮೇಲೆತ್ತಲ್ಪಟ್ಟವು. ಅನಂತರ ಭಾರತ ಪರ್ಯಾಯದ್ವೀಪ ಯಾವ ಗುರುತರವಾದ ಪರ್ವತಜನ್ಯ ಚಲನೆಗಳಿಗೂ ಒಳಗಾಗಿಲ್ಲ.

ದ್ರಾವಿಡ ಕಲ್ಪ: ಪ್ರಾಚೀನ ಜೀವಿಕಲ್ಪದ ಕೇಂಬ್ರಿಯನ್ ಯುಗದಿಂದ ಮಧ್ಯೆಕಾರ್ಬಾನಿಫೆರಸ್ ಯುಗದÀತನಕ ದ್ರಾವಿಡ ಕಲ್ಪ ಹಬ್ಬಿದೆ. ದಕ್ಷಿಣ ಭಾರತದಲ್ಲಿ ಈ ಕಲ್ಪದ ಶಿಲೆಗಳು ರೂಪುಗೊಂಡಿಲ್ಲ. ಉತ್ತರ ಭಾರತದಲ್ಲಿ ಇದು ಸಮುದ್ರ ಜಲಜ ಶಿಲೆಗಳಿಂದ ಕ್ರಮಬದ್ಧವಾಗಿ ರೂಪುಗೊಂಡಿದೆ. ಈ ಕಲ್ಪದ ಶಿಲೆಗಳನ್ನು ಐರೋಪ್ಯ ಕಲ್ಪಗಳ ಕೇಂಬ್ರಿಯನ್, ಸೈಲ್ಯೂರಿಯನ್, ಡೆವೋನಿಯನ್ ಮತ್ತು ಕೆಳಗಣ ಹಾಗೂ ಮಧ್ಯ ಕಾರ್ಬಾನಿಫರಸ್ ಯುಗಗಳ ಶಿಲೆಗಳೊಡನೆ ನಿಖರವಾಗಿ ಸಮತೋಲನ ಮಾಡಬಹುದು. ಸಾವಿರಾರು ಮೀಟರ್ ದಪ್ಪವಿರುವ ದ್ರಾವಿಡ ಕಲ್ಪದ ಶಿಲಾಸ್ತರಗಳು ಕಾಶ್ಮೀರ ಮತ್ತು ಸ್ಪಿಟಿ ಪ್ರದೇಶಗಳಲ್ಲಿ ಚೆನ್ನಾಗಿ ರೂಪುಗೊಂಡಿವೆ. ಅಷ್ಟೆ ಅಲ್ಲದೆ ಇಲ್ಲಿಯ ಶಿಲಾಸ್ತರಗಳು ಅತ್ಯಂತ ಜೀವ್ಯವಶೇಷಭರಿತವಾಗಿವೆ. ಹಿಮಾಲಯದ ಕೇಂಬ್ರಿಯನ್ ಶಿಲೆಗಳಲ್ಲಿಯ ಅಗ್ನೋಸ್ಟೆಸ್, ಓಲೆನಸ್ ಎಂಬ ಟ್ರೈಲೊಬೈಟುಗಳು. ಲಿಂಗ್ಯುರೆಲ್ಲಾ ಎಂಬ ಬಾಹುಪಾದಿಯ (ಬ್ರಾಕಿಯೋಪಾಡ್) ಪಳೆಯುಳಿಕೆಗಳು ಪ್ರಪಂಚದ ಇತರ ಕೇಂಬ್ರಿಯನ್ ಯುಗದ ಪಳೆಯುಳಿಕೆಗಳಿಗೆ ಸರಿಸಮವಾಗಿವೆ.
ಕಾಶ್ಮೀರ ಮತ್ತು ಸ್ಪಿಟಿ ಪ್ರದೇಶಗಳ ಕೇಂಬ್ರಿಯನ್ ಶಿಲೆಗಳ ಮೇಲೆ ಸುಮಾರು 600ರಿಂದ 900 ಮೀ ದಪ್ಪದಷ್ಟು ಅರ್ಡೊವೀಸಿಯನ್, ಸೈಲ್ಯೂರಿಯನ್ ಮತ್ತು ಡೆವೋನಿಯನ್ ಯುಗದ ಶಿಲೆಗಳು ಸಂಚಯನಗೊಂಡಿವೆ. ಯೂರೋಪ್ ಮತ್ತು ಉತ್ತರ ಅಮೆರಿಕದ ಶಿಲೆಗಳು ಹೊಂದಿರುವಂಥ ಮೇಲೆ ಹೇಳಿದ ಮೂರು ಯುಗಗಳ ಮುಖ್ಯ ಪಳೆಯುಳಿಕೆಗಳಾದ ಟ್ರೆಲೊಬೈಟುಗಳು, ಬಾಹುಪಾದಿಗಳು, ಹವಳಗಳು ಮತ್ತು ಕ್ರೈನಾಯ್ಡುಗಳ ಗುಂಪಿಗೆ ಸೇರಿದ ಪಳೆಯುಳಿಕೆಗಳು ಇಲ್ಲಿಯ ಶಿಲಾಸ್ತರಗಳಲ್ಲಿ ಅಖಂಡವಾಗಿವೆ. ಕಾಶ್ಮೀರ ಪ್ರದೇಶದಲ್ಲಿ ಶಿಲಾಸ್ತರಗಳು ಪ್ರಪಂಚವಾಗಿ ಹಬ್ಬಿದ್ದರೆ ಸ್ಪಿಟಿ ಪ್ರದೇಶದಲ್ಲಿ ಪಳೆಯುಳಿಕೆಗಳು ಅಗಾಧ ರೀತಿಯಲ್ಲಿವೆ.

ಸುಮಾರು 900 ಮೀ ದಪ್ಪವುಳ್ಳ ಕೆಳಗಣ ಮತ್ತು ಮಧ್ಯಮ ಕಾರ್ಬಾನಿಫೆರಸ್ ಯುಗದ ಶಿಲೆಗಳು ಕಾಶ್ಮೀರ ಮತ್ತು ಸ್ಪಿಟಿ ಪ್ರದೇಶಗಳಲ್ಲಿ ಡೆವೋನಿಯನ್ ಶಿಲೆಗಳ ಮೇಲೆ ಸಂಚಯನಗೊಂಡಿವೆ. ಇವುಗಳಲ್ಲಿ ಸಿರಿಂಗೋಥೆರಿಸ್ ಸುಣ್ಣಶಿಲೆ ಮತ್ತು ಫೆನಸೆಲ್ಲಾ ಜೇಡು ಶಿಲೆಗಳ ಮುಖ್ಯವಾದವು. ಈ ಶಿಲಾಸಮುದಾಯವನ್ನು ಸಮುದ್ರಜೀವಿ ಮೊಲ್ಲಸ ಗುಂಪಿಗೆ ಸೇರಿದ ಟ್ರೈಲೊಬೈಟುಗಳ ಮತ್ತು ಹವಳಗಳ ಅವಶೇಷಗಳ ಆಧಾರದ ಮೇರೆಗೆ ವಿಭಜನೆ ಮಾಡಲಾಗಿದೆ. ಭೂವೈಜ್ಞಾನಿಕ ಸರ್ವೇಕ್ಷಣೆಯಾಗಬೇಕಾಗಿರುವ ಹಿಮಾಲಯಪರ್ವತ ಶ್ರೇಣಿಗಳಲ್ಲಿ ಈ ಕಲ್ಪದ ಶಿಲೆಗಳು ಇನ್ನೂ ಎಷ್ಟೊ ಇರಬಹುದೆಂದು ನಂಬಲಾಗಿದೆ. ದ್ರಾವಿಡಕಲ್ಪದ ಶಿಲಾಸಮುದಾಯ ಉತ್ತರ ಭಾರತ. ಹಿಮಾಲಯ ಪ್ರದೇಶಗಳಲ್ಲಿ ರೂಪುಗೊಂಡಿರುವಂತೆ ಬೇರೆ ಯಾವ ಪ್ರದೇಶಗಳಲ್ಲೂ ರೂಪುಗೊಂಡಿಲ್ಲ.
ಆರ್ಯಕಲ್ಪ: ಭಾರತದ ಆರ್ಯಕಲ್ಪದ ಶಿಲೆಗಳು ಮೇಲಣ ಕಾರ್ಬಾನಿ ಫೆರಸ್ ಯುಗದಿಂದ ಪ್ಲೀಸ್ಟೊಸೀನ್ ಯುಗದ ಕೊನೆಯತನಕ ಸೇರಿ ಅಂತ್ಯದಲ್ಲಿ ಭೂಚರಿತ್ರೆ ಮತ್ತು ಭೂಗೋಳಗಳ ಸಮನ್ವಯವಾದಂತೆ ತೋರುತ್ತದೆ. ಆರ್ಯ ಕಲ್ಪದ ಪ್ರಾರಂಭಕ್ಕೆ ಮೊದಲು ಮಧ್ಯ ಕಾರ್ಬಾನಿಫೆರಸ್ ಯುಗದ ಅಂತ್ಯದಲ್ಲಿ ಭಾರತದೇಶದ ಮೇಲ್ಮೈಲಕ್ಷಣ ಮತ್ತು ಭೂಭಾಗಗಳ ಹಂಚಿಕೆಯಲ್ಲಿ ಪ್ರಚಂಡ ಬದಲಾವಣೆಗಳಾದುವು. ಭೂತೊಗಟೆ ಪುನಃ ಸರಿಹೊಂದಾಣಿಕೆಯಾಗುವಾಗ ಅನೇಕ ಭೂಪ್ರದೇಶಗಳು ನೀರಿನಲ್ಲಿ ಮುಳುಗಿ ನೂತನ ಶಿಲೆಗಳ ಸಂಚಯನಕ್ಕೆ ಅಣಿಮಾಡಿದುವು. ಇವುಗಳಲ್ಲಿ ಉತ್ತರಭಾರತದ ಅಖಂಡಭಾಗ, ಉತ್ತರ ಹಿಮಾಲಯ ಪ್ರದೇಶ, ಟಿಬೆಟ್ ಮತ್ತು ಚೀನಾದ ಸ್ವಲ್ಪಭಾಗ ಸೇರಿ ಒಂದು ಮಹಾಸಾಗರವಾಗಿತ್ತು. ಪ್ರಾಚೀನ ಮೆಡಿಟರೇನಿಯನ್ ಸಾಗರವಾಗಿ ಭೂಮಂಡಲವನ್ನು ಸುತ್ತುವರಿದಿದ್ದ ಟೆಥಿಸ್ ಮಹಾಸಾಗರ ಪಶ್ಚಿಮದಿಂದ ನುಗ್ಗಿ ಬಂದು ಮಧ್ಯಪ್ರಾಚೀನಕಲ್ಪದ ಅಂತ್ಯದತನಕ ಈ ಮಹಾಬೋಗುಣಿಯಲ್ಲಿ ಶಿಲಾಸಂಚಯನ ಸಾಗುತ್ತಿತ್ತು. ಆದ್ದರಿಂದ ಹಿಮಾಲಯಪರ್ವತದ ಪ್ರದೇಶದಲ್ಲಿ ಪರ್ಮಿಯನ್ ಯುಗದಿಂದ ಇಯೊಸೀನ್ ಯುಗದತನಕ ಶಿಲೆಗಳು ಅನುಕ್ರಮವಾಗಿ ರೂಪುಗೊಂಡು ಪ್ರಪಂಚದಲ್ಲೇ ದಾಖಲೆಮಾಡಿದೆ. ಈ ದೀರ್ಘಕಾಲದ ಸಂಚಯನಾವರ್ತನ ಹಿಮಾಲಯದಲ್ಲಿ ಎರಡನೆಯ ಹಂತ ಮತ್ತು ಸಮುದ್ರ ನಿಕ್ಷೇಪಗಳ ಸಂಚಯನಗಳ ಅಂತ್ಯಭಾಗವಾಗಿದೆ.

	ಇದೇ ಪರ್ವಕಾಲದಲ್ಲಿ ಭಾರತ ಪರ್ಯಾಯದ್ವೀಪದಲ್ಲಿ ಬೇರೆ ರೀತಿಯಲ್ಲಿ ಭೂ ವೈಜ್ಞಾನಿಕವಾಗಿ ಭೂಮೇಲ್ಮೈಲಕ್ಷಣ ಮತ್ತು ಭೂಭಾಗಗಳ ಬದಲಾವಣೆಗಳಾದವು. ವಿಂಧ್ಯಾಕಾಲದಿಂದಲೂ ಶಾಂತ ರೀತಿಯಲ್ಲಿ ಸತತವಾಗಿ ಶಿಲಾಸಂಚಯನಗೊಳ್ಳುತ್ತಿದ್ದ ಪ್ರದೇಶಗಳನ್ನು ಮೇಲಣ ಕಾರ್ಬಾನಿಫೆರಸ್ ಯುಗದ ಭೂಚಲನೆಗಳು ಭಂಗಗೊಳಿಸಿದುವು. ಪರ್ವತಜನ್ಯ ಚಲನೆಗಳಿಗೂ ಬಾಗದೇ ಎತ್ತರಪ್ರದೇಶಗಳಾಗಿ ಉಳಿದಿದ್ದ ಭೂಭಾಗಗಳು ಕೂಡ ಭುಕವಚ ಮತ್ತು ಭುತೊಗಟೆಗಳ ಚಲನ ವಲನಗಳಿಗೆ ಮಣಿದು ಮಹತ್ತರವಾದ ಬಿರುಕುಗಳನ್ನು ಹೊಂದಿದುವು. ಈ ರೀತಿ ಮಹಾಬಿರುಕುಗಳಾದ ಕಡೆಗಳಲ್ಲಿ ಸ್ತರಭಂಗದಿಂದ ಮಹಾಭೂಕುಸಿತಗಳಾಗಿ, ಒಂದಕ್ಕೊಂದು ಹೆಣೆದಂತೆ ಬೋಗುಣಿಯಾಕಾರದ ಮಹಾತಗ್ಗುಗಳುಂಟಾದುವು. ಸುತ್ತಮುತ್ತಣ ಪ್ರದೇಶದ ನದಿಗಳ ಮತ್ತು ಸರೋವರಗಳ ಕಾರ್ಯಾಚರಣೆಯಿಂದ ಮಹಾತಗ್ಗುಗಳು ಕಲ್ಲು, ಮಣ್ಣು, ಮಡ್ಡಿ ಮುಂತಾದ ಸಂಚಯನಗಳಿಂದ ತುಂಬಲ್ಪಟ್ಟವು. ಸಂಚಯನ ಮುಂದುವರಿದಂತೆಲ್ಲ ಬೋಗಿಣಿಗಳ ತಳಗಳು ಕುಸಿಯುತ್ತ ಹೋಗಿ ಸಾವಿರಾರು ಮೀಟರುಗಳ ದಪ್ಪ ಶುದ್ಧ ನೀರಿನ ಭೂಭಾಗದೊಳಗಿನ ನಿಕ್ಷೇಪಗಳು ರೂಪುಗೊಂಡವು. ಆ ಕಾಲದಲ್ಲಿ ವಾಸಿಸುತ್ತಿದ್ದ ಪ್ರಾಣಿಗಳು ಮತ್ತು ಸಸ್ಯಗಳ ಅವಶೇಷಗಳು ಶಿಲಾ ಸಮುದಾಯಗಳಲ್ಲಿ ಸಮಾಧಿಗೊಂಡಿವೆ. ಭಾರತದ ಆರ್ಯಕಲ್ಪದ ಶಿಲಾಚರಿತ್ರೆಯಲ್ಲಿ ಪರ್ಯಾಯದ್ವೀಪಾಂತರ ಪ್ರದೇಶದಲ್ಲಿ ಸಮುದ್ರಸಂಚಯನ ಶಿಲಾನಿಕ್ಷೇಪಗಳಿದ್ದರೆ ಪರ್ಯಾಯದ್ವೀಪ ಪ್ರದೇಶದಲ್ಲಿ ಸಿಹಿನೀರಿನ ಭೂಮೇಲಣ ಶಿಲಾನಿಕ್ಷೇಪಗಳಿವೆ.

	ಆರ್ಯಕಲ್ಪ ಪ್ರಾರಂಭವಾದಾಗ ಭಾರತದಲ್ಲಿ ಪ್ರಚಂಡ ಭೂಚಲನೆಗಳಿಂದ ಭೂಭಾಗವಲ್ಲದೆ ವಾಯುಮಂಡಲದಲ್ಲೂ ಮಹತ್ತರ ಬದಲಾವಣೆಗಳಾಗಿ ಇವು ನೀರ್ಗಲ್ಲು ಯುಗಕ್ಕೆ ನಾಂದಿ ಹಾಕಿದುವು. ಇದರ ಗುರುತರ ಗುರುತುಗಳನ್ನು ಹಿಮನದಿಯ ಒಡ್ಡು, ಗುಂಡುಶಿಲಾಸ್ತರಗಳು ಮತ್ತು ಪೆಂಟೆಶಿಲೆಗಳ ರೂಪದಲ್ಲಿ ಅನೇಕ ಸ್ಥಳಗಳಲ್ಲಿ ಕಾಣಬಹುದು. ಪರ್ಯಾಯದ್ವೀಪಾಂತರ ಪ್ರದೇಶದಲ್ಲಿ ಪಾಕಿಸ್ತಾನದ ಹಜಾರದಿಂದ ಅಸ್ಸಾಮಿನ ಪೂರ್ವಭಾಗದವರೆಗೆ ಹಬ್ಬಿದ್ದ ಮಹಾಸಾಗರದಲ್ಲಿ ಮಧ್ಯಜಿ ವಿಕಲ್ಪದಿಂದ ಆಧುನಿಕ ಜೀವಿಕಲ್ಪದ ಸ್ವಲ್ಪಭಾಗದವರೆಗೆ ಜಲಜಶಿಲೆಗಳು ಮಹತ್ತರವಾಗಿ ಸಂಚಯನಗೊಂಡವು. ಈ ಶಿಲಾಸ್ತೋಮಗಳು ಈಗ ಹಿಮಾಲಯ ಪರ್ವತಗಳ ಮಧ್ಯಭಾಗವಾಗಿವೆ.

	ದಖನ್ ಪ್ರಸ್ಥಭೂಮಿಯಲ್ಲಿ ದ್ರಾವಿಡ ಕಲ್ಪದ ಅಂತ್ಯದಲ್ಲೂ ಆರ್ಯಕಲ್ಪ ಪ್ರಾರಂಭವಾಗುವಾಗಲೂ ಬೇರೆ ರೀತಿಯ ಭೂಚಲನವಲನಗಳಿಂದ ಜನಿಸಿದ ಬೋಗುಣಿ ಮತ್ತು ಮಹಾ ತಗ್ಗುಗಳಲ್ಲಿ ಸಂಚಯಿಸಿದ ಶಿಲಾನಿಕ್ಷೇಪಗಳಲ್ಲಿ ಆಗ ವಾಸವಾಗಿದ್ದ ಪ್ರಾಣಿ ಮತ್ತು ಸಸ್ಯಗಳ ಅಗಣಿತ ಜೀವ್ಯವಶೇಷಗಳು ತುಂಬಿವೆ. ಆದ್ದರಿಂದ ಈ ಶಿಲಾಸ್ತೋಮಗಳನ್ನು ಮಧ್ಯಜೀವಿಕಲ್ಪದಲ್ಲಿ ಇದ್ದಂಥ ಜೀವಿ ಮತ್ತು ಸಸ್ಯಗಳ ಬಗ್ಗೆ ಹಾಗೂ ಆ ಕಾಲದ ಭೂಮಿಯ ಪರಿಸರದ ಬಗ್ಗೆ ವಿವರಣೆ ನೀಡುವ ಅತ್ಯಂತ ಸಿರಿವಂತ ದಾಖಲೆಗಳೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಪ್ರಾಚೀನಯುಗದ ಅಂತ್ಯಭಾಗ ಮತ್ತು ಮಧ್ಯಜೀವಿ ಕಲ್ಪದ ಸಮಗ್ರಭಾಗದ ಶಿಲಾಸಮುದಾಯಗಳು ಪರ್ಯಾಯದ್ವೀಪಾಂತರದಲ್ಲಿ ಸಮುದ್ರ ಶಿಲಾಸಂಚಯನಗಳಿಂದಲೂ ಪರ್ಯಾಯದ್ವೀಪದಲ್ಲಿ ಸಿಹಿನೀರಿನ ಮತ್ತು ಭೂನಿಕ್ಷೇಪಗಳಿಂದಲೂ ಪ್ರತಿನಿಧಿಸಲ್ಪಟ್ಟಿವೆ.

	(v) ಗೊಂಡ್ವಾನಾ ಸಮುದಾಯ: ಭಾರತದಲ್ಲಿ ಭೂಖಂಡಗಳೊಳಗೆ ನಿಕ್ಷೇಪಗೊಂಡ ಸಿಹಿನೀರಿನ ಶಿಲಾಸ್ತೋಮಗಳಿಗೆ ಗೊಂಡ್ವಾನಾ ಸಮುದಾಯಗಳೆಂದು ಹೆಸರು. ಇವುಗಳ ಗಾತ್ರ 6000 ಮೀಟರುಗಳನ್ನು ಮೀರಿದೆ. ಇವನ್ನು ಕೆಳಗಣ, ಮಧ್ಯಮ ಮತ್ತು ಮೇಲಣಗೊಂಡ್ವಾನ ಸಮುದಾಯಗಳೆಂದು ಮೂರು ಭಾಗಗಳಾಗಿ ವಿಭಜಿಸಿದೆ. ಇದೇ ತೆರನಾದ ಶಿಲಾಸ್ತೋಮಗಳು ದಕ್ಷಿಣ ಆಫ್ರಿಕ, ಮಡಗಾಸ್ಕರ್, ಆಸ್ಟ್ರೇಲಿಯ ಮತ್ತು ದಕ್ಷಿಣ ಅಮೆರಿಕಗಳಲ್ಲೂ ಭೂಖಂಡಗಳ ಮಧ್ಯದಲ್ಲಿ ರೂಪುಗೊಂಡಿವೆ. ಇವುಗಳ ಶಿಲಾಸ್ತರಗಳ ಗುಣ ಮತ್ತು ಪ್ರಾಗ್ಜೀವಿಗಳನ್ನು ಒಳಗೊಂಡಿರುವ ಪರಿ ಒಂದೇ ತೆರನಾಗಿದ್ದು ಈ ಭೂಖಂಡಗಳೆಲ್ಲ ಗೊಂಡ್ವಾನಾ ಕಾಲದಲ್ಲಿ ಅಖಂಡವಾದ ಒಂದೇ ಭೂಭಾಗವಾಗಿತ್ತೆಂದು ಸಾರುತ್ತವೆ. ಈ ಖಂಡಗಳ ಜೊತೆಗೆ ಅಂಟಾರ್ಕ್‍ಟಿಕಾ ಖಂಡವೂ ಸೇರಿತ್ತಂದು ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದಿದೆ.
	ಗೊಂಡ್ವಾನಾ ಸಮುದಾಯಗಳಲ್ಲಿ ನದಿಗಳ ಮತ್ತು ಸರೋವರಗಳ ನಿಕ್ಷೇಪಗಳು ಪ್ರತ್ಯೇಕ ರೀತಿಯಲ್ಲಿವೆ. ಇದರ ಶಿಲಾಸ್ತರಗಳಲ್ಲಿ ಆ ಕಾಲದಲ್ಲಿ ವಾಸವಾಗಿದ್ದ ಅನೇಕ ರೀತಿಯ ಸಸ್ಯಕೀಟ, ಮೀನು, ದ್ವಿಚರಪ್ರಾಣಿ ಮತ್ತು ಸರೀಸೃಪಗಳ ಜೀವ್ಯವಶೇಷಗಳು ಸಮಾಧಿಗೊಂಡಿವೆ. ಆಗಿನ ವಾಯುಗುಣದಲ್ಲಿ ತೀವ್ರ ವ್ಯತ್ಯಾಸವಿದ್ದು ನೀರ್ಗಲ್ಲಿನಿಂದ ಮರುಭೂಮಿಯ ವಾತಾವರಣಗಳ ಪರಿಸರದಲ್ಲಿ ಸಂಚಯನಗೊಂಡ ಶಿಲೆಗಳಿವೆ. ಈ ಸಮುದಾಯ ಪೂರ್ವ ಮತ್ತು ಮಧ್ಯಭಾರತದಲ್ಲಿ ದಾವೋದರ ಮತ್ತು ಮಹಾನದಿ ಕಣಿವೆಗಳಲ್ಲಿ ಮತ್ತು ಮಧ್ಯಪ್ರದೇಶದ ಸಾತ್ಪುರ ಬೆಟ್ಟಗಳಲ್ಲಿ ವ್ಯಾಪಕವಾಗಿಯೂ ಕಾಶ್ಮೀರ ಮತ್ತು ಸಿಕ್ಕಿಮಿನಲ್ಲಿ ಸಣ್ಣ ಪ್ರಮಾಣದಲ್ಲಿಯೂ ಹರಡಿದೆ.

	ಗೊಂಡ್ವಾನಾ ಸಮುದಾಯದ ಅಡಿಯಲ್ಲಿ ತಾಲ್ಚೀರ್ ಗುಂಡುಶಿಲಾಸ್ತೋಮ ಹಿಮದಿಂದ ರಾಚಲ್ಪಟ್ಟ ಸಣ್ಣ ಪುಡಿಶಿಲೆಗಳಿಂದ ದೊಡ್ಡಗುಂಡು ಬಂಡೆಗಳವರೆಗೆ ಹುಡಿಗಟ್ಟಿದ ಶಿಲಾಸ್ತರಗಳಿಂದಾಗಿದೆ. ಇದು ಇತರ ಗೊಂಡ್ವಾನಾ ಖಂಡಗಳಲ್ಲೂ ಇದೇ ಭೂಕಾಲದಲ್ಲಿ ರೂಪುಗೊಂಡಿದೆ. ಇದರ ಮೇಲೆ ಸುಮಾರು 2400 ಮೀ ದಪ್ಪದ ಕಲ್ಲಿದ್ದಲನ್ನೊಳಗೊಂಡ ಶಿಲೆಗಳು ಭಾರತದ ಶಿಲಾಚರಿತ್ರೆಯಲ್ಲಿ ದಾಮುದ ಶಿಲಾಸ್ತೋಮವೆಂದು ಪ್ರಸಿದ್ಧವಾಗಿವೆ. ಕಲ್ಲಿದ್ದಲುಗಳಲ್ಲಿ ಗಂಗಮಾಪ್ಟೆರಿಸ್ ಮತ್ತು ಗ್ಲಾಸಾಪ್ಟೆರಿಸ್ ಎಂಬ ಸಸ್ಯ ಪಳೆಯುಳಿಕೆಗಳು ಮುಖ್ಯವಾದವು. ಇವುಗಳ ಜೊತೆಯಲ್ಲಿ ಗಿಂಕ್‍ಕಾನ್, ಕೊರ್ಡೈಟಿಸ್, ಫರ್ನ್ ಇಕ್ವಿಸೆಟುಮಸ್ ಮತ್ತು ಲೈಕೊಪೋಡ್ ಎಂಬ ಸಸ್ಯಗಳ ಪಳೆಯುಳಿಕೆಗಳೂ ಇವೆ.

	ದಾಮುದ ಶಿಲಾಸ್ತೋಮದ ಮೇಲೆ ಪಾಂಚೆಟ್, ಮಹಾದೇವ ಮತ್ತು ಮಲೇರಿಶಿಲಾಸ್ತೋಮಗಳು ಕ್ರಮವಾಗಿ ಸಂಚಯನಗೊಂಡು ಅವು ಯೂರೋಪಿನ ಟ್ರಯಾಸಿಕ್ ಯುಗದ ಶಿಲೆಗಳಿಗೆ ಸರಿಸಮವಾಗಿವೆ. ಈ ಕಾಲದ ವಾಯುಗುಣದಲ್ಲಿ ಪ್ರಚಂಡ ಬದಲಾವಣೆಗಳು ಕಂಡುಬಂದಿವೆ. ಮೊದಲಿದ್ದ ಗೊಂಡಾರಣ್ಯಗಳು ನಾಶವಾಗಿ ಮರುಭೂಮಿ ವಾಯುಗುಣವುಂಟಾಗಿ ಸುಮಾರು 3000 ಮೀ ದಪ್ಪದ ಬರಡು ಮರಳು ಶಿಲೆಗಳು ಮತ್ತು ಕೆಂಪುಜೇಡಿ ಶಿಲೆಗಳು ಸಂಚಯನಗೊಂಡಿವೆ. ಕೆಲವು ಸ್ತರಗಳಲ್ಲಿ ಸಸ್ಯಗಳ ಅವಶೇಷಗಳು, ಮೀನುಗಳ ಪಳೆಯುಳಿಕೆ, ದ್ವಿಚರ ಪ್ರಾಣಿಗಳ ಮತ್ತು ಸರೀಸೃಪಗಳ ಜೀವ್ಯಶೇಷಗಳಿವೆ. ಸಾತ್ಪುರದ ಮಲೇರಿ ಶಿಲಾಸ್ತೋಮಗಳಲ್ಲಿ ಲೆಬಿರಿಂಥೋಡಾಂಟ್ಸ್, ಮಾಸ್ಟೊಡಾನ್ ಸಾರಸ್ ಮತ್ತು ಗೊಂಡ್ವಾನೊಸಾರಸ್ ಎಂಬ ದೈತ್ಯೋರಗಗಳ ಪಳೆಯುಳಿಕೆಗಳು ಮುಖ್ಯವಾದವು.

	ಸರೀಸೃಪಗಳ ಪಳಿಯುಳಿಕೆ, ಫರ್ನ್ ಸಸ್ಯಗಳು, ಮೊನಚಾದ ಎಲೆಗಳು ಮತ್ತು ಸೈಕಾಡುಗಳ ಅವಶೇಷಗಳ ಆಧಾರದ ಮೇಲಣ ಗೊಂಡ್ವಾನಾ ಸಮುದಾಯ ಜ್ಯುರಾಸಿಕ್ ಯುಗದಿಂದ ಕೆಳಗಣ ಕ್ರಿಟೇಷಸ್ ಯುಗದ ತನಕ ಹಬ್ಬಿತ್ತೆಂದು ಹೇಳಲಾಗಿದೆ. ಈ ಸಮುದಾಯದ ಶಿಲೆಗಳು ಬಿಹಾರಿನ ರಾಜ್‍ಮಹಲ್ ಬೆಟ್ಟಗಳಿಂದ ಹಿಡಿದು ತಮಿಳುನಾಡಿನವರೆಗೆ ಹೊರಹೊಮ್ಮಿದೆ. ಇವನ್ನು ಕೋಟಾ, ರಾಜ್‍ಮಹಲ್, ಜಬ್ಬಲ್ಪುರ ಮತ್ತು ಉಮಿಯಾ ಶಿಲಾಸ್ತೋಮಗಳೆಂದು ನಾಲ್ಕು ಭಾಗಗಳಾಗಿ ವಿಭಜಿಸಿದೆ. ಬಿಹಾರಿನ ರಾಜ್‍ಮಹಲ್ ಬೆಟ್ಟಗಳಲ್ಲಿ ಮೇಲಣ ಗೊಂಡ್ವಾನ ಸಮುದಾಯ ದಾಮುದ ಸಮುದಾಯದ ಮೇಲೆ ಅನನುರೂಪ್ಯತೆಯಿಂದ ಸಂಚಯಿಸಿದೆ. ಇಲ್ಲಿ ಜ್ವಾಲಾಮುಖಿಗಳಿಂದ ಹೊರಹೊಮ್ಮಿದ ಸುಮಾರು 600 ಮೀ ದಪ್ಪವುಳ್ಳ ಬಸ್ಟಾಲ್ ಮತ್ತು ಡಾಲ್‍ರೈಟ್ ಶಿಲೆಗಳು ಮೇಲಣ ಗೊಂಡ್ವಾನ ಸಮುದಾಯದಲ್ಲಿ ಅಂತಸ್ಸರಣಗೊಂಡಿವೆ. ರಾಜ್‍ಮಹಲ್ ಶಿಲಾಸ್ತೋಮದಲ್ಲಿ ಸೈಕಾಡ್, ಫರ್ನ್ ಮತ್ತು ಮೊನಚಾದ ಎಲೆಗಳ ಪಳೆಯುಳಿಕೆಗಳು ವಿಶೇಷವಾಗಿವೆ. ಸೈಕಾಡ್ ಸಸ್ಯ ಇಂದಿನ ಎಂಜಿಯೋಸ್ಪರ್ಮಿನ ವಂಶಾಭಿವೃದ್ಧಿಗೆ ಕಾರಣೀಭೂತವಾಗಿದೆ. ಕಚ್ ಮತ್ತು ಕಾಥೈವಾಡ ಪ್ರದೇಶದ ಮೇಲಣಗೊಂಡ್ವಾನಾ ಶಿಲೆಗಳು ಸಾಗರಜನಿತ ಮೇಲಣ ಜ್ಯುರಾಸಿಕ್ ಶಿಲೆಗಳ ಜೊತೆ ಬೆರೆತಿವೆ, ಕೆಪೆಲೋಪಾಡ್ ಮತ್ತು ಲೆಮೆಲ್ಲಿಬ್ರಾಂಕ್ಸ್ ಪಳೆಯುಳಿಕೆಗಳನ್ನು ಹೊಂದಿವೆ. ಕಚ್‍ನಲ್ಲಿ ಸುಮಾರು 900 ಮೀ ದಪ್ಪದ ಉಮಿಯಾ ಶಿಲಾಸ್ತೋಮ ಪ್ರಸರಿಸಿದೆ.

	(vi) ಹಿಮಾಲಯದ ಆರ್ಯಕಾಲ್ಪ: ಹಿಮಾಲಯ ಪರ್ವತ ಪ್ರದೇಶದಲ್ಲಿ ಗೊಂಡ್ವಾನಾ ಸಮುದಾಯ ಸಾಗರಜನಿತ ಶಿಲೆಗಳಿಂದ ಕೂಡಿ 900 ಮೀ ದಪ್ಪವಿದ್ದು ಮೇಲಣ ಕಾರ್ಬಾನಿಫೆರಸ್, ಪರ್ಮಿಯನ್, ಟ್ರಯಾಸಿಕ್, ಜ್ಯೂರಾಸಿಕ್, ಕ್ರಿಟೇಷಸ್ ಮತ್ತು ಇಯೊಸೀನ್ ಯುಗಗಳ ಶಿಲೆಗಳು ಅನೇಕ ರೀತಿಯ ಸಸ್ಯ ಮತ್ತು ಪ್ರಾಣಿಗಳ ಪಳೆಯುಳಿಕೆಗಳಿಂದ ಸಂಪದ್ಭರಿತವಾಗಿವೆ. ಹಿಮಾಯಲದ ಮಧ್ಯ ಜೀವಿಕಲ್ಪದ ಪಳೆಯುಳಿಕೆಗಳನ್ನು ಭಾರತ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯಿಂದ ಪೇಲಿಯಂಟೋಲೋಜಿಯಾ ಇಂಡಿಕಾ ಎಂಬ ಬೃಹದ್ಗ್ರಂಥದಲ್ಲಿ ಅನೇಕ ಮಹಾಭೂವಿಜ್ಞಾನಿಗಳು ವಿವರಿಸಿದ್ದಾರೆ. ಈ ಶಿಲಾಸಮುದಾಯ ಕಾಶ್ಮೀರದ ಮಧ್ಯ ಹಿಮಾಲಯದ ಅಕ್ಷಿಯ ಉತ್ತರದಿಂದ ಸ್ಪಿಟಿ, ಗರ್ಹ್‍ವಾಲ್, ನೇಪಾಲ, ಮತ್ತು ಸಿಕ್ಕಿಮಿನಿಂದ ಟಿಬೆಟ್‍ವರೆಗೆ ಪ್ರಮುಖವಾಗಿ ಹಬ್ಬಿವೆ. ಇಲ್ಲಿಯ ಶಿಲಾಸ್ತೋಮಗಳು ಯೂರೋಪಿನ ಆಲ್ಪ್ಸ್ ಪರ್ವತಶ್ರೇಣಿಯಲ್ಲಿ ರೂಪುಗೊಂಡಿರುವ ಮಧ್ಯಜೀವಿಕಲ್ಪದ ಶಿಲಾಸ್ತೋಮಗಳಿಗೆ ಸರಿಸಮಾನವಾಗಿವೆ.

	(vii) ಕಾಶ್ಮೀರದ ಮಧ್ಯಜೀವಿಕಲ್ಪ: ಕಾಶ್ಮೀರದಲ್ಲಿ ಪರ್ವೊ-ಕಾರ್ಬಾನಿಫೆರಸ್ ಯುಗದ ಶಿಲಾಸ್ತೋಚಗಳು ಸುಮಾರು 6000 ಮೀ ದಪ್ಪವಿದ್ದು ಸಾಗರದಲ್ಲಿ ಮತ್ತು ಸರೋವರಗಳಲ್ಲಿ ನಿಕ್ಷೇಪಗೊಂಡ ಜಲಜಶಿಲೆಗಳನ್ನು ಮತ್ತು ಜ್ವಾಲಾಮುಖಿ ಶಿಲೆಗಳನ್ನು ಹೊಂದಿವೆ. ಪ್ರೊಡಕ್ಟಸ್ ಸುಣ್ಣ ಶಿಲಾಸ್ತರ ಇವುಗಳಲ್ಲಿ ಮುಖ್ಯವಾದದ್ದು. ಈ ಸ್ತರಗಳಲ್ಲಿ ಪ್ರೊಡಕ್ಟಸ್ ಮತ್ತು ಸ್ಫೈರಿಫರ್ ಎಂಬ ಬಾಹುಪಾದಿಗಳು ಪರ್ಮಿಯನ್ ಯುಗದ ಮಾದರಿ ಪಳಿಯುಳಿಕೆಗಳಿವೆ. ಈ ಶಿಲಾಸ್ತರಗಳ ಮೇಲೆ ಸ್ಲೇಟುಗಳು, ಜ್ವಾಲಾಮುಖಿ ಶಿಲೆಗಳು ಮತ್ತು ಪೈರೊಕ್ಲಾಸ್ಟಿಕ್ ಶಿಲೆಗಳು ಹರಡಿವೆ. ಇವುಗಳ ಮೇಲೆ ಟ್ರಯಾಸಿಕ್ ಯುಗದ ಸುಣ್ಣಶಿಲಾಸ್ತರಗಳು ಜೀವ್ಯವಶೇಷಭರಿತವಾಗಿ ನಿಕ್ಷೇಪಗೊಂಡಿವೆ. ಜೀವ್ಯವಶೇಷಗಳಲ್ಲಿ ಅಮ್ಮೊನೈಟ್ ಜಾತಿಗೆ ಸೇರಿದ ಓಟೊಸಿರಾಸ್, ಓಫಿಸಿರಾಸ್ ಮತ್ತು ಮೀಕೊಸಿರಾಸ್ ಮುಖ್ಯವಾದವು. ಈ ಶಿಲಾಸ್ತೋಮದ ಮೇಲೆ ಸಾಧಾರಣವಾಗಿ ರೂಪುಗೊಂಡಿರುವ ಜ್ಯುರಾಸಿಕ್ ಮತ್ತು ಕ್ರಿಟೇಷಸ್ ಯುಗದ ಶಿಲಾಸಮುದಾಯಗಳು ಕೆಲವು ಪಳೆಯುಳಿಕೆಗಳಿಂದ ಕೂಡಿವೆ.

	ಸ್ಪಿಟಿ ಪ್ರದೇಶದ ಕಾಂಗ್ರ ಹಿಮಾಲಯದಲ್ಲಿ ಪರ್ಮಿಯನ್, ಟ್ರಯಾಸಿಕ್, ಜ್ಯುರಾಸಿಕ್ ಮತ್ತು ಕ್ರಿಟೇಷಸ್ ಯುಗದ ಶಿಲಾಸ್ತೋಮಗಳು ಬಹಳ ಸೊಗಸಾಗಿ ರೂಪುಗೊಂಡಿವೆ. ಇನ್ನೂ ಉನ್ನತವಾಗಿ ಕುಮಾಯೂನ್ ಪ್ರದೇಶದ ಲೀಲ್ಯಾಂಗ್ ಬಳಿ ಹಬ್ಬಿರುವ ಸುಮಾರು 1200 ಮೀ ದಪ್ಪದ ಶಿಲಾಸ್ತೋಮಗಳನ್ನು ಲೀಲ್ಯಾಂಗ್ ಸಮುದಾಯವೆಂದು ಹೆಸರಿಸಲಾಗಿದೆ. ಇದು ಸಂಪೂರ್ಣವಾಗಿ ಸಾಗರಜನಿತ ಶಿಲೆಗಳಿಂದ ಕೂಡಿ ಜೀವ್ಯವಶೇಷಭರಿತವಾಗಿದೆ. ಇಲ್ಲಿಯ ಪಳೆಯುಳಿಕೆಗಳು ಆಲ್ಪ್ಸ್ ಪರ್ವತದ ಈ ಕಲ್ಪದ ಶಿಲೆಗಳಲ್ಲಿರುವ ವಿವಿಧ ರೀತಿಯ ಕೆಫೆಲೋಪೋಡ ಮತ್ತು ಲೆಮೆಲ್ಲಿಬ್ರಾಂಕ್ ಜಾತಿಯ ಪ್ರಾಣಿಗಳ ಅವಶೇಷಗಳಿಗೆ ಸೇರಿ ಸಮಾನವಾಗಿವೆ. ಜ್ಯುರಾಸಿಕ್ ಯುಗದ ಸ್ಪಿಟಿ ಜೇಡುಶಿಲೆಗಳ ಮೇಲೆ ಕ್ರಿಟೇಷಸ್ ಯುಗಕ್ಕೆ ಸೇರಿದ ಗುಯ್ಯಲ್ ಮತ್ತು ಚಿಕ್ಕಿಮ್ ಸಮುದಾಯಗಳು ರೂಪುಗೊಂಡಿವೆ. ಇವಕ್ಕೆ ಸಮಾಂತರವಾದ ಶಿಲೆಗಳು ಹಿಮಾಲಯದ ಹಜಾರ, ಕಾಶ್ಮೀರ ಮತ್ತು ಗರ್ಹ್‍ವಾಲ್ ಭಾಗಗಳಲ್ಲೂ ರೂಪುಗೊಂಡಿವೆ. ಗೌರೀಶಂಕರ ಶಿಖರ ಪರ್ವೋ ಕಾರ್ಬಾನಿಫೆಸರಸ್ ಸುಣ್ಣಶಿಲಾಸ್ತೋಮದಿಂದ ಕೂಡಿ ಉತ್ತರಕ್ಕೆ ಪರ್ಮಿಯಾನ್, ಟ್ರಯಾಸಿಕ್, ಜ್ಯುರಾಸಿಕ್ ಮತ್ತು ಕ್ರಿಟೇಷಸ್ ಯುಗಗಳ ಶಿಲೆಗಳು ಅನುರೂಪ್ಯತೆಯಿಂದ ಸೇರಿಸಲ್ಪಟ್ಟು ಟಿಬೆಟ್ ಪ್ರಸ್ಥಭೂಮಿಯ ಕಡೆಗೆ ಇಳಿವೋರೆಯಾಗಿದೆ.

	(viii) ಇತರ ಮಧ್ಯಜೀವಿಕಲ್ಪ ಶಿಲೆಗಳು ಕಚ್‍ಕಾಥೈವಾರ್ ಮತ್ತು ಜೈಸಾಲ್‍ಮಾರ್ ಪ್ರದೇಶಗಳಲ್ಲಿ ಸಾಗರಜನಿತ ಜ್ಯುರಾಸಿಕ್ ಮತ್ತು ಕ್ರಿಟೇಷಸ್ ಶಿಲಾ ಸಮುದಾಯಗಳು ಹರಡಿವೆ. ಕಚ್‍ನಲ್ಲಿ ಮೇಲಣ ಜ್ಯುರಾಸಿಕ್ ಯುಗದ ಶಿಲಾಸ್ತೋಮ 1800 ಮೀ ದಪ್ಪದ ಸುಣ್ಣಕಲ್ಲು, ಮರಳುಶಿಲೆ ಮತ್ತು ಜೇಡುಶಿಲೆಗಳಿಂದ ಕೂಡಿ ಅನನ್ಯ ರೀತಿಯಲ್ಲಿ ಜನಿಸಿದ ಸಾವಿರಾರು ರೀತಿಯ ಅಮ್ಮೊನೈಟ್ ಜಾತಿಯ ಪ್ರಾಣಿಗಳ ಅವಶೇಷಗಳನ್ನು ಹೊಂದಿವೆ. ಈ ಶಿಲಾಸ್ತೋಮವನ್ನು ಪಾಛಮ್, ಚಾರಿ, ಕತ್ರೋಲ್ ಮತ್ತು ಉಮಿಯ ಎಂದು ನಾಲ್ಕು ಭಾಗಗಳಾಗಿ ವಿಭಜಿಸಿದೆ. ಇದೇ ರೀತಿ ತಮಿಳುನಾಡಿನ ತಿರುಚ್ಚಿರಾಪಳ್ಳಿಯಲ್ಲಿ ಸಮುದ್ರ ಒಳನುಗ್ಗಿ ಸಂಚಯಿಸಿದ ಶಿಲೆಗಳು ಸುಮಾರು 900 ಮೀ ದಪ್ಪವಾಗಿ ಪಳೆಯುಳಿಕೆಗಳಿಂದ ಸಂಪದ್ಭರಿತವಾಗಿ ಸಾಗರಜನಿತ ಸುಣ್ಣಶಿಲೆ, ಕ್ರಮಸ್ತರವುಳ್ಳ ಮರಳುಶಿಲೆ, ಜೇಡುಶಿಲೆ ಮತ್ತು ಸುಣ್ಣಾಂಶವುಳ್ಳ ಶಿಲಾಸ್ತರಗಳನ್ನು ಹೊಂದಿವೆ. ಈ ಶಿಲಾಸ್ತೋಮ ಅತ್ಯಂತ ಪ್ರಾಚೀನವಾದ ಆರ್ಷೇಯ ಕಾಲದ ನೈಸ್‍ಗಳ ಮೇಲೆ ಅನನುರೂಪ್ಯತೆಯಿಂದ ಹರಡಿದೆ.

	ತಮಿಳುನಾಡಿನ ಕ್ರಿಟೇಷಸ್ ಶಿಲೆಗಳನ್ನು ಉಪತ್ತೂರು, ತಿರುಚ್ಚಿರಾಪಳ್ಳಿ ಮತ್ತು ಅರಿಯಲೂರು ಸಮುದಾಯಗಳೆಂದು ಮೂರು ಭಾಗಗಳಾಗಿ ವಿಭಜಿಸಿದೆ. ಅನಂತರ ಅರಿಯಲೂರು ಸಮುದಾಯವನ್ನು ಅರಿಯಲೂರು ಮತ್ತು ನಿನಿಯೂರು ಸಮುದಾಯಗಳೆಂದು ಪುನರ್ವಿಂಗಡಣೆ ಮಾಡಿದೆ. ಈ ಕಾಲದಲ್ಲಿ ವಿವಿಧ ರೀತಿಯಲ್ಲಿ ವಿಕಾಸಗೊಂಡ ಜೀವರಾಶಿಗಳು ಪಳೆಯುಳಿಕೆಗಳಾಗಿವೆ. ಇಲ್ಲಿಯ ಶಿಲಾಸಮುದಾಯಗಳಲ್ಲಿ ಬ್ರೇಕಿಯೊಪೋಡ ಹವಳಗಳು, ಶಂಖಗಳು, ಕೆಫಲೊಪೋಡ ಮತ್ತು ಲೆಮೆಲ್ಲಿಬ್ರಾಂಕುಗಳು, ಹಲವಾರು ರೀತಿಯ ಪ್ರಾಣಿಗಳು ಹಾಗೂ ಕೆಲವು ಸರೀಸೃಪಗಳ ಅವಶೇಷಗಳು ಮುಖ್ಯವಾದವು. ನರ್ಮದಾ ನದಿಯ ಮುಖಾಂತರ ಆದಂಥ ಮೂರನೆಯ ಸಮುದ್ರ ಒಳನುಗ್ಗುವಿಕೆಯಲ್ಲಿ ಜಬ್ಬಲ್ಪುರದ ಬಳಿ ಕ್ರಿಟೇಷಸ್ ಯುಗದ ಕೊರಕ್ಲೈನ್ ಸುಣ್ಣಶಿಲೆಗಳು ಮತ್ತು ಸುಣ್ಣಜೇಡುಶಿಲೆಗಳು ಸಂಚಯಗೊಂಡಿದ್ದು ಈಗ ಬೇರೆ ಬೇರೆಯಾಗಿ ಪ್ರತ್ಯೇಕಿಸಲ್ಪಟ್ಟು ಹೊರಹಮ್ಮುಗಳು ಬರೋಡ, ಗ್ವಾಲಿಯರ್ ಮತ್ತು ಕಾಥೈವಾರುಗಳಲ್ಲಿ ಹರಡಿವೆ. ಇವನ್ನು ಬಾಘ್ ಶಿಲಾಸ್ತರಗಳೆನ್ನುತ್ತಾರೆ. ಇಲ್ಲಿಯ ಶಿಲಾಸ್ತರಗಳಲ್ಲಿರುವ ಪ್ರಾಣಿಗಳ ಪಳೆಯುಳಿಕೆಗಳು ತಿರುಚ್ಚಿರಾಪಳ್ಳಿಯಲ್ಲಿರುವ ಪ್ರಾಣಿವರ್ಗಕ್ಕಂತಲೂ ಭಿನ್ನವಾಗಿವೆ.

	(ix) ದಖನ್ ಜ್ವಾಲಾಮುಖಿ ಶಿಲೆ: ಕ್ರಿಟೇಷಸ್ ಯುಗದ ಅಂತ್ಯ ಮತ್ತು ಇಯೊಸೀನ್ ಯುಗದ ಪ್ರಾರಂಭಕಾಲ ದಖನ್ ಪ್ರಸ್ಥಭೂಮಿಯಲ್ಲಿ ತೀವ್ರತರ ಜ್ವಾಲಾಮುಖು ಚಟುವಟಿಕೆಗೆ ಖ್ಯಾತಿ ಪಡಿದೆದೆ. ಮಹಾರಾಷ್ಟ್ರದ ನೂರಾರು ಸಾವಿರ ಚದರಕಿಲೊಮೀಟರ್ ಪ್ರದೇಶ ಭೂಮಿಯ ಬಿರುಕುಗಳಿಂದ ಹರಿದು ಬಂದ ಲಾವಾರಸದಲ್ಲಿ ಮುಳುಗಿಹೋಯಿತು. ಲಾವಾರಸ ಘನೀಭವಿಸಿ ಉಂಟಾದ ಶಿಲೆಗಳನ್ನು ಡೆಕ್ಕನ್ ಟ್ರ್ಯಾಪ್ಸ್ ಎಂದು ಕರೆಯುತ್ತಾರೆ. ಜ್ವಾಲಾಮುಖಿ ಶಿಲೆಗಳಿಂದ ಉಂಟಾದ ಪ್ರಸ್ಥಭೂಮಿಯ ವಿಸ್ತಿರ್ಣ 10,00,000 ಚಕಿಮೀ. ಇದರ ದಪ್ಪ 1800 ಮೀ. ಅನಂತರದ ಯುಗಗಳಲ್ಲಿ ಈ ಪ್ರದೇಶ ಸವೆತ ಮತ್ತು ಕೊರೆತಕ್ಕೆ ಒಳಗಾಗಿ ಮಟ್ಟಸ ಶಿರೋಭಾಗಗಳುಳ್ಳ ಬೆಟ್ಟಗಳಾಗಿ ಪ್ರತ್ಯೇಕಗೊಂಡು ಇವು ಪ್ರಕೃತಿ ಸೊಬಗಿಗೆ ಹೆಸರಾದ ಪಶ್ಚಿಮ ಘಟ್ಟಗಳ ಸಾಲಿಗೆ ಸೇರಿವೆ. ಲಾವಾ ಹರಿದಸ್ತರಗಳ ಮಧ್ಯೆ ನದಿಗಳಿಂದ ಅಥವಾ ಸರೋವರಗಳಲ್ಲಿ ಸಂಚಯಗೊಂಡ ಜಲಜಶಿಲೆಗಳನ್ನು ಅಂತಸ್ತರ ಶಿಲೆಗಳು ಎಂದು ಕರೆಯುತ್ತಾರೆ. ಇವು ಜ್ವಾಲಾಮುಖಿ ಚಟುವಟಿಕೆ ಶಾಂತವಾಗಿದ್ದ ಕಾಲದಲ್ಲಿ ರೂಪುಗೊಂಡು ತಮ್ಮಲ್ಲಿ ಅನೇಕ ರೀತಿಯ ಸಸ್ಯ ಮತ್ತು ಪ್ರಾಣಿಗಳ ಪಳೆಯುಳಿಕೆಗಳನ್ನು ಒಳಗೊಂಡಿವೆ.

	ಮಾಳವ, ಮಧ್ಯಪ್ರದೇಶ ಮತ್ತು ಕೆಲವು ಸುತ್ತಮುತ್ತಲ ಪ್ರದೇಶಗಳಲ್ಲಿ ದಖನ್ ಜ್ವಾಲಾಮುಖಿಗಳ ಬುಡದಲ್ಲಿ ಸಣ್ಣ ಪ್ರಮಾಣದ ಆದರೆ ವಿವಿಧ ಶಿಲಾಗುಂಪುಗಳಿಂದ ಕೂಡಿದ ಸರೋವರ ನಿಕ್ಷೇಪಗಳಿವೆ. ಸುಣ್ಣಶಿಲೆ, ಬೆಣಚುಕಲ್ಲು ಮತ್ತು ಗ್ರಿಟ್‍ಶಿಲೆಗಳಿಂದ ಕೂಡಿದ ಶಿಲಾಸ್ತರಳನ್ನು ಲಾಮೆಟಾ ಸಮುದಾಯವೆಂದು ಕರೆಯುತ್ತಾರೆ. ಜಬ್ಬಲ್ಪುರದ ಬಳಿಯ ಲಾಮೆಟಾ ಸಮುದಾಯದಲ್ಲಿ 12 ಜಾತಿಯ ದೈತ್ಯ ಉರಗಗಳ ಪಳೆಯುಳಿಕೆಗಳು ಪತ್ತೆಯಾಗಿವೆ. ಟೈಟನೊಸಾರಸ್ ಮತ್ತು ಮೆಇಲೊಸಾರಸ್ ಎಂಬ ರಾಕ್ಷಸಾಕಾರದ ದೈತ್ಯೋರಗಗಳ ಜೊತೆಯಲ್ಲಿ ಮೊಸಳೆಗಳು, ಸಸ್ಯಾಹಾರಿಯಾದ ದೊಡ್ಡಹಲ್ಲಿಗಳ ಪಳೆಯುಳಿಕೆಗಳೂ ಇಲ್ಲಿ ದೊರೆತಿವೆ.

	ಇದೇ ಸಮಯದಲ್ಲಿ ಮಧ್ಯ ಒಳಹಿಮಾಲಯ ಪರ್ವತ ಪ್ರದೇಶದಲ್ಲಿ ಜ್ವಾಲಾಮುಖಿಗಳ ಮತ್ತು ಅಗ್ನಿಶಿಲೆಗಳ ಅಂತಸ್ಸರಣ ಪ್ರಾರಂಭವಾಯಿತು. ಕುಮಾಯೂನ್-ಜೋಹಾರ್ ಪ್ರದೇಶದಲ್ಲಿ ಆಮ್ಲ ಮತ್ತು ಪ್ರತ್ಯಾಮ್ಲ ಲಾವಾರಸಗಳು ಮತ್ತು ಗ್ರಾನೈಟ್, ಗ್ಯಾಬ್ರೊ ಮತ್ತು ಪೆರಿಡೊಟೈಟ್ ಅಂತಸ್ಥಶಿಲೆಗಳು ಒಂದಾದ ಮೇಲೊಂದರಂತೆ ಅಂತ್ಸರಣಗೊಂಡವು. ಈ ಕಾಲದಲ್ಲಿ ಇದ್ದಕ್ಕಿದ್ದಂತೆ ಜೀವವಿಕಾಸವುಂಟಾಗಿ ನಾನಾ ರೀತಿಯ ನೂತನ ಪ್ರಾಣಿಗಳು ಮತ್ತ ಸಸ್ಯಗಳು ಜೀವತಳೆದವು. ಆಧುನಿಕ ಜೀವಿಕಲ್ಪ ಅಭ್ಯುದಯಗೊಂಡು ಮಧ್ಯಜೀವಿ ಕಲ್ಪದಲ್ಲಿ ಉಚ್ಛ್ರಾಯ ಸ್ಥಿರಿಯಲ್ಲಿದ್ದ ದೈತ್ಯೋರಗಗಳು, ಸರೀಸೃಪಗಳು ಅಳಿದುಳಿದಿದ್ದ ಬೆನ್ನೆಲಬಿಲ್ಲದ ಪ್ರಾಣಿಗಳು ಅವನತಿಗೊಂಡು ಸ್ತನಿಗಳು ಮತ್ತು ಶಂಖಾಕೃತಿಯ ಪ್ರಾಣಿಗಳು ಹೆಚ್ಚು ವಿಕಾಸಗೊಂಡವು. ಭಾರತದ ಶಿಲಾಚರಿತ್ರೆಯಲ್ಲಿ ಪ್ರಪಂಚದ ಇತರ ದೇಶಗಳಲ್ಲಿರುವಂತೆ ಕ್ರಿಟೇಷಸ್ ಮತ್ತು ಇಯೊಸೀನ್ ಯುಗಗಳ ಮಧ್ಯದಲ್ಲಿ ಅನನುರೂಪ್ಯತೆ ಉಂಟಾಗಿಲ್ಲ. ಭಾರತ ಭೂವಿಜ್ಞಾನದಲ್ಲಿಯೂ ಟರ್ಷಿಯರಿ ಯುಗ ಭೂಮೇಲ್ಮೈಲಕ್ಷಣಗಳನ್ನು ರೂಪಿಸುವಲ್ಲಿ ಅತಿ ಮೂಕ್ಯ ಕಾಲ. ಏಕೆಂದರೆ ದಖನ್ ಪ್ರಸ್ಥಭೂಮಿ ಮತ್ತು ಹಿಮಾಲಯಪರ್ವತ ಪ್ರದೇಶಗಳಲ್ಲಿ ಈಗ ಕಂಡುಬರುವ ಮೇಲ್ಮೈಸ್ವರೂಪ ರೂಪುಗೊಂಡುದು ಟರ್ಷಿಯರಿ ಯುಗದಲ್ಲೇ.

	(x) ಹಿಮಾಯಲದ ಉದಯ: ಟೆಥಿಸ್ ಮಹಾಸಾಗರದಲ್ಲಿ ಹಲವಾರು ಕಲ್ಪಗಳಿಂದ ಸಂಚಯಿಸಿ ಕೂಡಿಕೊಂಡಿದ್ದ ಜಲಜ ಶಿಲಾಸಮೂಹ ಮೇಲಣ ಕಾರ್ಬಾನಿಫೆರಸ್ ಯುಗದಲ್ಲಿ ಮಹತ್ತರವಾಗಿ ಒತ್ತರಿಸಲ್ಪಟ್ಟು ಪರ್ವತಜನ್ಯ ಚಲನೆಗಳಿಂದ ಮೇಲೆತಲ್ಪಟ್ಟಿತೊ. ಕೆಲವು ಕಾಲ ಶಾಂತಗೊಂಡು ಪುನಃ ಚಟುವಟಿಕೆಗೊಳ್ಳುತ್ತಿದ್ದ ಪರ್ವತಜನ್ಯಚಲನೆಗಳು ಒಂದಾದ ಮೇಲೊಂದರಂತೆ ಮೂರು ಆವರ್ತಗಳಲ್ಲಿ ಹಂತಹಂತವಾಗಿ ಮಧ್ಯ ಇಯೊಸೀನ್ ಯುಗದಿಂದ ಟರ್ಷಿಯರಿ ಕಲ್ಪದ ಅಂತ್ಯದತನಕ ಮುಂದುವರಿದುವು. ಈ ಚಲನೆಗಳಲ್ಲಿ ಮೊದಲನೆಯ ಆವರ್ತ ಇಯೊಸೀನ್ ಯುಗದ ಕೊನೆಯಲ್ಲೂ ಎರಡನೆಯ ಆವರ್ತ ಮಯೊಸೀನ್ ಯುಗದ ಮಧ್ಯಾಂತರದಲ್ಲೂ ಪ್ರಬಲವಾಗಿ ಸಾಗಿದುವು. ಅತಿಮುಖ್ಯವಾದ ಮೂರನೆಯ ಆವರ್ತ ಪ್ಲಿಯೊಸೀನ್ ಯುಗದ ಅನಂತರ ಚಟುವಟಿಕೆಗೊಂಡು ಮಹತ್ತರ ಬದಲಾವಣಿಗಳನ್ನು ತಂದಿತು ಮತ್ತು ಅತ್ಯುನ್ನತವಾಗಿ ಪರ್ವತಶ್ರೇಣಿಗಳಾಗಿ ಶಿಲೆಗಳು ಮೇಲೆತ್ತಲ್ಪಟ್ಟವು. ಆದ್ದರಿಂದ ಮೂರನೆಯ ಆವರ್ತದ ಪರ್ವತಜನ್ಯ ಚಟುವಟಿಕೆಗಳಲ್ಲಿ ಹಿಮಾಲಯಪರ್ವತ ಮಧ್ಯ ಅಕ್ಷಿಯಭಾಗದಿಂದ ಹಿಡಿದು ಪಾದವಲಯದಲ್ಲಿರುವ ಶಿವಾಲಿಕ್ ಶ್ರೇಣಿಗಳ ಸಮೇತ ಮೇಲೆತ್ತಲ್ಪಟ್ಟಿತು. ಸದ್ಯದ ಸ್ವರೂಪ ಮಧ್ಯ ಪ್ಲೀಸ್ಟೊಸೀನ್ ಅನಂತರ ಉಂಟಾಯಿತು. ಇಂದಿಗೂ ಚಲನವಲನಗಳು ಸಂಪೂರ್ಣವಾಗಿ ಸಮಾಪ್ತಿಯಾಗದೆ ಕೆಲವೊಮ್ಮೆ ಭೂಕಂಪನಗಳಾಗಿ ಕನಿಷ್ಟ ಪ್ರಮಾಣದ ಮೇಲೆತ್ತುವಿಕೆ ಸಾಗುತ್ತಿರುವುದೆಂದು ಪರಿಗಣಿಸಲಾಗಿದೆ. ಈ ಕಾಲದಲ್ಲಿ ಗೊಂಡ್ವಾನ ಭೂಖಂಡ ಬಿರಿದ ಬಳಿಕ ಭಾರತ ಪರ್ಯಾಯದ್ವೀಪ ಈಗಿನ ತ್ರಿಕೋನಾಕಾರವನ್ನು ಪಡೆಯಿತು.

	(xi) ಟರ್ಷಿಯರಿ ಕಲ್ಪ: ಟರ್ಷಿಯರಿ ಕಲ್ಪದ ಶಿಲೆಗಳು ದಖನ್ ಪ್ರಸ್ಥಭೂಮಿಯಲ್ಲಿ ಕೇರಳ ಮತ್ತು ಗುಜರಾತ್ ತೀರಗಳ ಬಳಿ ಸಣ್ಣ ಪ್ರಮಾಣದಲ್ಲೂ ಕಚ್ ಬಳಿಯಲ್ಲಿ ದಖನ್ ಜ್ವಾಲಾಮುಖಿ ಜಲಶಿಲೆಗಳ ಮೇಲೆ ದೊಡ್ಡ ಪ್ರಮಾಣದಲ್ಲೂ ರೂಪುಗೊಂಡಿವೆ. ಭಾರತದ ಪೂರ್ವ ಕಡಲ ತೀರದಲ್ಲಿ ಇಯೊಸೀನ್, ಮಯೊಸೀನ್ ಮತ್ತು ಪ್ಲಿಯೊಸೀನ್ ಯುಗಗಳಿಗೆ ಸೇರಿದ ಕಡಲೂರು ಮರಳುಶಿಲೆಗಳು ವ್ಯಾಪಕವಾಗಿ ಹರಡಿವೆ. ಮಯೊ-ಪ್ಲಿಯೊಸೀನ್ ಭಾಗದ ಕಡಲೂರು ಮರಳುಶಿಲಾಸ್ತೋಮ ಕಂದುಬಣ್ಣದ ಲಿಗ್ನೈಟ್ ಕಲ್ಲಿದ್ದಲ ನಿಕ್ಷೇಪವನ್ನು ಹೊಂದಿದೆ.

	ಪರ್ಯಾಯದ್ವೀಪಾಂತರ ಪ್ರದೇಶದಲ್ಲಿ ಟರ್ಷಿಯರಿ ಕಲ್ಪದ ಶಿಲೆಗಳ ಅತಿ ವಿಸ್ತಾರವಾಗಿ ಸಿಂಧ್ ಮತ್ತು ಬಲೂಚಿಸ್ತಾನದಿಂದ ಪ್ರ್ರಾರಂಭಗೊಂಡು ಹಿಮಾಲಯದ ವಾಯವ್ಯ ಭಾಗದಲ್ಲಿ ಪ್ರಚಂಡವಾಗಿ ಹರಡಿ, ಅಲ್ಲಿಂದ ಪೂರ್ವಕ್ಕೆ ಪಂಜಾಬ್, ಕುಮಾಯೂನ್, ನೇಪಾಳ ಮತ್ತು ಆಸ್ಸಾಮ್ ಹಿಮಾಲಯಗಳನ್ನೊಳಗೊಂಡು ಬ್ರಹ್ಮಪುತ್ರ ನದಿಯ ಕಂದರದವರೆಗೆ ಹಬ್ಬಿವೆ. ಶಿಲಾ¸ಮೂಹಗಳು ಇಲ್ಲಿಂದ ದಕ್ಷಿಣಕ್ಕೆ ತಿರುಗಿ ಹಿಮಾಲಯದ ಸಮುಖಾವಲೋಕನ ಅಕ್ಷಿಯ ತಿರುವಿನಲ್ಲಿ ವಿಸ್ತಾರವಾಗಿ ಹರಡಿ ಗಾತ್ರದಲ್ಲೂ ಅತಿಶಯವಾಗಿದ್ದು ಅಸ್ಸಾಮ್-ಬರ್ಮಾ ದೇಶಗಳ ಗಡೀ ಪ್ರಾಂತದ ಪರ್ವತಗಳಾಗಿ ಬರ್ಮಾದ ದಕ್ಷಿಣ ತುದಿಯವರೆಗೂ ಮುಂದುವರಿದಿವೆ. ಟರ್ಷಿಯರಿ ಶಿಲೆಸಮುದಾಯದಲ್ಲಿ ಸಾಗರಜನಿತ ಶಿಲೆಗಳು ಮತ್ತು ನಿಕ್ಷೇಪಗಳು ರೂಪುಗೊಂಡಿವೆ. ಸಿಂಧ್‍ನಿಂದ ಬರ್ಮಾವರೆಗೆ ಕೆಳಗಣ ಟರ್ಷಿಯರಿ ಸಮುದಾಯ ಇಯೊಸೀನ್ ಮತ್ತು ಓಲಿಗೋಸೀನ್ ಯುಗದ ಸಾಗರಜನಿತ ಶಿಲೆಗಳಿಂದ ಕೂಡಿದೆ. ಮೇಲಣ ಟರ್ಷಿಯರಿ ಸಮುದಾಯ ಮಯೋಸೀನ್ ಮತ್ತು ಪ್ಲಿಯೊಸೀನ್ ಯುಗದ ನದಿಗಳ ಮತ್ತು ಭೂಮೇಲಣ ನಿಕ್ಷೇಪಗಳಿಂದ ರೂಪುಗೊಂಡಿವೆ. ಟರ್ಷಿಯರಿ ಕಲ್ಪದ ಆರಂಭದಲ್ಲಿ ಸಾಗರ ವ್ಯಾಪಿಸಿಕೊಂಡಿದ್ದು ಇಯೊಸೀನ್ ಮತ್ತು ಕೆಳಗಣ ಮಯೊಸೀನ್ ಯುಗಗಳಲ್ಲಿ ಸಾಗರಜನಿತ ಶಿಲೆಗಳಿಂದ ತುಂಬಲ್ಪಟ್ಟಿತು. ಕಾಲಾನುಕ್ರಮದಲ್ಲಿ ಹಿಮಾಲಯ ಪರ್ವತಗಳು ಮೇಲೇರಿದುದರಿಂದ ಸಾಗರ ಇಬ್ಭಾಗವಾಗಿ ಪೂರ್ವಕ್ಕೆ ಬಂಗಾಲ ಕೊಲ್ಲಿಯವರೆಗೆ ಪಶ್ಚಿಮಕ್ಕೆ ಸಿಂಧ್ ಮತ್ತು ಕಚ್ ರಾಣಾ ಪ್ರದೇಶದವರೆಗೆ ಹಿಂದಕ್ಕೆ ಸರಿಯಿತು. ಮಧ್ಯ ಮಯೊಸೀನ್ ಅನಂತರ ಭಂಗಗೊಂಡ ಸಾಗರ ಶಿಲಾನಿಕ್ಷೇಪಗಳ ಮೇಲೆ ನದಿ ಮುಖಜಭೂಮಿಗಳ ನಿಕ್ಷೇಪಗಳು ಮುಂದುವರಿದುವು.

	(xii) ಇಯೊಸೀನ್ ಸಮುದಾಯ: ಇಯೊಸೀನ್ ಯುಗದ ಶಿಲೆಗಳು ಕಾಶ್ಮೀರದ ಲಡಾಖ್ ಮತ್ತು ಕುಮಾಯೂನ್ ಪ್ರದೇಶಗಳಲ್ಲಿ ಚೆನ್ನಾಗಿ ರೂಪುಗೊಂಡಿವೆ. ಲಡಾಖಿನಲ್ಲಿ ಪರ್ವತದ ಮಧ್ಯ ಅಕ್ಷಿಯ ಉತ್ತರಕ್ಕೆ ಸಣ್ಣದಾದ ಆದರೆ ಹೆಚ್ಚು ಉದ್ದವಾಗಿರುವ ನುಮ್ಮುಲಿಟಿಕ್ ಸುಣ್ಣಶಿಲೆಯೊಡನಿರುವ ಶಿಲಾಸ್ತರಗಳೊಳಗೆ ಪ್ರತ್ಯಾಮ್ಲೀಯ ಲಾವಾ ಶಿಲೆಗಳು ಅಂತಃಸ್ತರಗೊಂಡಿವೆ. ನುಮ್ಮುಲಿಟಿಕ್ ಸುಣ್ಣಶಿಲೆ ಹಿಮಾಲಯ ಪರ್ವತದಲ್ಲಿ ಸಾಗರಜನಿತ ಶಿಲೆಗಳ ಸಂಚಯ ಮುಗಿದುದರ ಹೆಗ್ಗುರುತು, ಮತ್ತು ಹಿಂದಕ್ಕೆ ಸರಿಯುತ್ತ ಹೋದ ಟೆಥಿಸ್ ಮಹಾಸಾಗರ ಅಂತಿಮವಾಗಿ ಅದೃಶ್ಯವಾಗುವ ಮುನ್ನ ಖಾರಿಯಲ್ಲಿ ನಿಕ್ಷೇಪಗೊಂಡ ಗುರುತೂ ಆಗಿದೆ. ಏಕೆಂದರೆ ಪರ್ವತ ಮೇಲೇರುವಿಕೆ ಇಯೊಸೀನ್ ಯುಗದ ಅಂತ್ಯದಲ್ಲಿ ಪ್ರಾರಂಭವಾಯಿತು.

	ಪ್ರಪಂಚದ ಬಹುಭಾಗಗಳಲ್ಲಿ ನುಮ್ಮುಲಿಟಿಕ್ ಸುಣ್ಣಶಿಲೆ ಇಯೊಸೀನ್ ಯುಗದ ಮಾದರಿ ನಿಕ್ಷೇಪದ ಗುರುತು. ಭಾರತದ ಶಿಲಾಚರಿತ್ರೆಯಲ್ಲಿ ಇಯೊಸೀನ್ ಯುಗದ ಶಿಲಾಸಮುದಾಯವನ್ನು ರಾಣಿಕೋಟ್, ಲಾಕಿ ಮತ್ತು ಕಿರ್ಥಾರ್ ಶಿಲಾಸ್ತೋಮಗಳೆಂದು ಮೂರು ಭಾಗಗಳಾಗಿ ವಿಭಜಿಸಿದೆ. ಶಿಲಾಸ್ತರಗಳು ಜೀವ್ಯವಶೇಷಗಳಿಂದ ಸಂಪದ್ಭರಿತವಾಗಿ ನಾನಾ ರೀತಿಯ ಫೊರಾಮಿನಿಫೆರ, ಉದರಪಾದಿ (ಶಂಖ) ಹವಳ ಮತ್ತು ಎಕಿನಾಯ್ಡ್ಸ್ ಪ್ರಾಣಿಗಳ ಪಳೆಯುಳಿಕೆಗಳನ್ನು ಹೊಂದಿವೆ. ಓಲಿಗೊಸೀನ್ ಶಿಲೆಗಳೊಡನೆ ಕೂಡಿರುವ ಮೇಲಣ ಇಯೊಸೀನ್ ಯುಗದ ಶಿಲಾಸ್ತರಗಳು ಪೆಟ್ರೋಲಿಯಮ್ ತೈಲ ನಿಕ್ಷೇಪಗಳಿಗೆ ಹೆಸರಾದವು. ಅಸ್ಸಾಮ್, ಗುಜರಾತ್ ಮತ್ತು ಮುಂಬೈತೀರ ಪ್ರಾಂತಗಳಲ್ಲಿ ತೈಲ ಶೇಖರಣೆಗೊಂಡಿರುವ ಶಿಲಾಜಾಡುಗಳ ನಿಕ್ಷೇಪಗಳಿವೆ.

	ಜೀಲಮ್ಮಿನಿಂದ ನೈನಿತಾಲ್‍ವರೆಗೆ ಸಣ್ಣ ಶಿಲಾಸ್ತರಗಳಾದರೂ ಅವ್ಯಾಹತವಾಗಿ ಇಯೊಸೀನ್ ಯುಗದ ಶಿಲೆಗಳು ಹಬ್ಬಿವೆ. ಆಸ್ಸಾಮಿನಲ್ಲಿ ಈ ಯುಗದ ಶಿಲೆಗಳು ನೂರಾರು ಚಕಿಮೀ ಪ್ರದೇಶವನ್ನು ಆಕ್ರಮಿಸಿವೆ. ಇವನ್ನು ಜಯಂತಿಯ ಮತ್ತು ಬರೇಲಿ ಸಮುದಾಯಗಳೆಂದು ಹೆಸರಿಸಲಾಗಿದೆ. ಬರೇಲಿ ಸಮುದಾಯದಲ್ಲಿ ದಪ್ಪಸ್ತರಗಳ ಲಿಗ್ನೈಟ್ ಕಲ್ಲಿದ್ದಲ ನಿಕ್ಷೇಪಗಳಿವೆ. ಇವು ಕೆಲವು ತೈಲ ನಿಕ್ಷೇಪಗೊಂಡ ಶಿಲಾಸ್ತರಗಳೊಡನೆ ಕೂಡಿಕೊಂಡಿವೆ. ಜಮ್ಮುವಿನಲ್ಲಿ ದೊರೆಯುವ ಕಲ್ಲಿದ್ದಲು ಮತ್ತು ಬಿಕಾನೆರಿನ ಲಿಗ್ನೈಟ್ ನಿಕ್ಷೇಪ ಈ ಸಮುದಾಯಕ್ಕೆ ಸೇರಿದವು. ಟರ್ಷಿಯರಿ ಕಲ್ಪದ ಆರಂಭದ ಶಿಲೆಗಳಲ್ಲಿ ಮತ್ತು ಇಯೊಸೀನ್ ಯುಗದ ಸಮುದಾಯದಲ್ಲಿ ಕಲ್ಲಿದ್ದಲು ಮತ್ತು ಪೆಟ್ರೋಲಿಯಮ್ ಜೊತೆಗೆ ಹಿಮಾಲಯ ಪ್ರದೇಶದ ಮಾದರಿಯಲ್ಲಿ ಕಲ್ಲುಪ್ಪು, ರಾಜಸ್ಥಾನದ ಬೀಕಾನೇರ್ ಬಳಿ ಜಿಪ್ಸಮ್ ಲವಣ ಮತ್ತು ಸಿಮೆಂಟ್ ತಯಾರಿಕೆಗೆ ಉಪಯುಕ್ತವಾದ ಸುಣ್ಣಶಿಲೆ ಮಿತಿಯಿಲ್ಲದಷ್ಟಿವೆ.

	(xiii) ಓಲಿಗೊಸೀನ್ ಮತ್ತು ಮಯೊಸೀನ್ ಸಮುದಾಯಗಳು: ಓಲಿಗೊಸೀನ್ ಯುಗದ ಶಿಲಾಸಂಚಯಮ ಪೂರ್ಣವಾಗಿ ಸಾಗರ ಪರಿಸರದಲ್ಲಿ ನಡೆಯಿತೇ ಎಂಬುದು ಸಂಶಯಾಸ್ಪದವಾಗಿದೆ. ಹಿಮಾಲಯದ ಹೊರವಲಯದಲ್ಲಿ ಇಯೊಸೀನ್ ಶಿಲೆಗಳ ಮೇಲೆ ಮಯೊಸೀನ್ ಯುಗದ ಶಿಲೆಗಳಿರುವುದರಿಂದ ಇವೆರಡೂ ಯುಗದ ಶಿಲಾಸ್ತರಗಳ ಮಧ್ಯೆ ಮಧ್ಯಾಂತರ ಕಾರ್ಯವೇನಾದರೂ ಉಂಟಾಗಿದೆಯೇ ಎಂದು ಶಂಕಿಸಲಾಗಿದೆ. ಆಸ್ಸಾಮಿನ ಸುಮಾರು 4500 ಮೀ ದಪ್ಪದ ಬರೈಲಿ ಸಮುದಾಯದಲ್ಲಿ ಕೆಲವು ಪೆಟ್ರೋಲಿಯಮ್ ಶಿಲಾಸ್ತರಗಳಿರುವುದರಿಂದ ಇವು ಓಲಿಗೊಸೀನ್ ಯುಗದ ಶಿಲೆಗಳೆಂದು ನಂಬಲಾಗಿದೆ. ಉತ್ತರಭಾರತದಲ್ಲಿ ಓಲಿಗೊಸೀನ್ ಯುಗಾಂತ್ಯದ ವೇಳೆಗೆ ಸಾಗರಗಳು ಅದೃಶ್ಯವಾಗಿ ನದಿಗಳ ನಿಕ್ಷೇಪಗಳು ಸಂಚಯನಗೊಳ್ಳಲು ಪ್ರಾರಂಭವಾಯಿತು. ಪಂಜಾಬ್ ಹಿಮಾಲಯದಲ್ಲಿ ಹೊರಹೊಮ್ಮಿರುವ ಕೆಂಪು ಮತ್ತು ನೇರಳೆ ಬಣ್ಣದ ಮರಳು ಶಿಲೆಗಳು ಮತ್ತು ಜೇಡುಶಿಲೆಗಳನ್ನು ಮುರ್ರೀ ಶಿಲಾಶ್ರೇಣಿ ಎಂದು ಕರೆಯುತ್ತಾರೆ. ಇದರ ಸಮಕಾಲೀನ ಕುಮಾಯೂನ್ ಬಳಿಯ ಹೊರ ಹಿಮಾಲಯದ ಶಿಲೆಗಳನ್ನು ದಗ್‍ಷಾಯ್ ಮತ್ತು ಕಶಾಲಿ ಶಿಲಾವರ್ಗಗಳೆಂದೂ ಅಸ್ಸಾಮಿನಲ್ಲಿ ರೂಪುಗೊಂಡಿರುವ ಈ ಯುಗದ ಶಿಲಾಶ್ರೇಣಿಯನ್ನು ಸುರ್ಮ ಶ್ರೇಣಿ ಎಂದೂ ಹೆಸರಿಸಿದ್ದಾರೆ. ಈ ಶಿಲಾಸಮುದಾಯಗಳಲ್ಲಿ ಪಳೆಯುಳಿಕೆಗಳು ಹೆಚ್ಚಾಗಿಲ್ಲ. ಕೆಲವು ಸಸ್ಯಗಳು ಮತ್ತು ಬೆನ್ನೆಲುಬುಳ್ಳ ಪ್ರಾಣಿಗಳ ಅವಶೇಷಗಳು ಮಾತ್ರ ದೊರಕಿವೆ. ಉತ್ತರ ಭಾರತದಲ್ಲಿ ಆದಿಕಾಲದಿಂದ ಪ್ರಸಿದ್ಧಿಯಾಗಿದ್ದ ಸಾಗರ ಸಂಪೂರ್ಣವಾಗಿ ಮತ್ತು ಅಂತಿಮವಾಗಿ ಈ ಯುಗದ ಅಂತ್ಯದಲ್ಲಿ ಅದೃಶ್ಯವಾಯಿತು.

	(xiv) ಶಿವಾಲಿಕ್ ಸಮುದಾಯ: ಡೆಹ್ರಾಡೂನ್ ಬಳಿಯಿರುವ ಶಿವಾಲಿಕ್ ಬೆಟ್ಟಗಳಲ್ಲಿ ಸುಮಾರು 6100 ಮೀ ಲಂಬವಾಗಿಯೂ ಅದಕ್ಕೆ ತಕ್ಕಂತೆ ವ್ಯಾಪಕವಾಗಿಯೂ ಹಬ್ಬಿರುವ ಶಿಲೆಗಳಿಗೆ ಶಿವಾಲಿಕ್ ಸಮುದಾಯ ಎಂದು ಹೆಸರು. ಪ್ರಪಂಚದಲ್ಲೇ ಅದ್ಭುತವಾಗಿರುವ ಈ ಶಿಲಾಸಮುದಾಯದಲ್ಲಿ ಸ್ತನಿಗಳ ಜೀವ್ಯವಶೇಷಗಳು ಸಮಾಧಿಗೊಂಡಿವೆ. ಹೆಸರಾಂತ ಭೂವಿಜ್ಞಾನ ಸಂಗ್ರಹಾಲಯಗಳಲ್ಲೆಲ್ಲ ಇಲ್ಲಿಯ ಪಳೆಯುಳಿಕೆಗಳು ಉಂಟು. ಶಿವಾಲಿಕ್ ಶಿಲೆಗಳು ಪೂರ್ಣವಾಗ ನದಿಗಳ ಮತ್ತು ನದೀ ಮುಕಜಭೂಮಿಗಳ ನಿಕ್ಷೇಪಗಳಿಂದ ಕೂಡಿವೆ. ಈ ಶಿಲಾಸಮುದಾಯ ಸಿಂಧೂನದಿಯಿಂದ ಸಿಕ್ಕಿಮ್‍ವರೆಗೆ ಮತ್ತು ಸಿಂಧ್-ಬಲೂಚಿಸ್ತಾನದಿಂದ ಅಸ್ಸಾಮ್ ಹಾಗೂ ಬರ್ಮವರೆಗೆ 16ರಿಂದ 48 ಕಿಮೀ ಅಗಲವಾಗಿ ಹಿಮಾಲಯದ ಪಾದವಲಯಗಳ ಇಕ್ಕಡೆಗಳಲ್ಲಿ ಅಂಚಿನಂತೆ ಪ್ರಸರಿಸಿವೆ. ಇವು ಹಲವಾರು ನದಿಗಳಿಂದ ಹಿಮಾಲಯದ ಮಡ್ಡಿಕಲ್ಲುಗಳನ್ನು ಸವೆಸಿ, ಕೊರೆದು, ಕೊಚ್ಚಿಕೊಂಡು, ಬಲು ದೂರದವರೆಗೆ ಸಾಗಿಸಿ ತಂದು ಪರ್ವತಪಾದದ ಬಳಿಯಲ್ಲಿ ಸಂಚಯಿಸಿದ್ದರಿಂದ ಉಂಟಾದವು. ಈ ಶಿಲೆಗಳು ಹಿಮಾಲಯದ ಮೂರನೆಯ ಹಂತದ ಪರ್ವತಜನ್ಯ ಚಲನೆಗಳಿಗೆ ಈಡಾದುದರಿಂದ ಇವು ಸಹ ಮಡಿಕೆಗಳನ್ನು ಹೊಂದಿ ಕಿವುಚಲ್ಪಟ್ಟಿವೆ. ಶಿವಾಲಿಕ್ ಶಿಲೆಗಳು ಮಧ್ಯ ಹಿಮಾಲಯದ ಹಿರಿಯವಯಸ್ಸಿನ ಶಿಲೆಗಳಿಂದ ಪ್ರಮುಖವಾದ ಸ್ತರಭಂಗಗಳಿಂದಲೂ ಸ್ತರಗಳ ಮೇಲ್ಚಾಚುವಿಕೆಗಳಿಂದಲೂ ಪ್ರತ್ಯೇಕಿಸಲ್ಪಟ್ಟಿವೆ.

	ಪ್ರಾಗ್ಜೀವಿಗಳ ಅಧ್ಯಯನಕ್ಕೆ ಶಿವಾಲಿಕ್ ಸಮುದಾಯ ಅತ್ಯಂತ ಹೆಸರುವಾಸಿಯಾದುದು. ಇದರಲ್ಲಿ ಬಗೆಬಗೆಯ ಬೆನ್ನೆಲುಬುಳ್ಳ ಪ್ರಾಣಿಗಳ ಅವಶೇಷಗಳು ಹೇರಳವಾಗಿವೆ. ಈ ಶಿಲಾಸಮುದಾಯದಲ್ಲಿ ಗತಕಾಲದ ಆನೆಗಳು, ಖಡ್ಗಮೃಗ, ಕುದುರೆ, ಜಿರಾಫೆ, ಒಂಟೆ, ಹಂದಿ, ನೀರಾನೆ, ಮೊಸಳೆ, ಜಿಂಕೆ, ಕಪಿ ಮತ್ತು ಉಷ್ಟ್ರಪಕ್ಷಿಯ ಜಾತಿಗೆ ಸೇರಿದ ಪಕ್ಷಿಗಳ ಜೀವ್ಯವಶೇಷಗಳು ಅಸಂಖ್ಯಾವಾಗಿವೆ. ಸ್ತನಿಗಳಲ್ಲಿ ತೀವ್ರವಾಗಿ ಆಘಾತ ಹೊಂದಿದ ಪ್ರಾಣಿಗಳಲ್ಲಿ ಆನೆಜಾತಿಗೆ ಸೇರಿದ ಪ್ರಾಣಿಗಳು ಮೊದಲನೆಯದು. ಆ ಕಾಲದಲ್ಲಿ ಜೀವಂತವಾಗಿದ್ದ ಮೂವತ್ತು ಜಾತಿಯ ಆನೆಗಳ ಪೈಕಿ ಈಗ ಒಂದು ಮಾತ್ರ ಜೀವಂತವಾಗಿದೆ. ವಿವಿಧ ರೀತಿಯ ಪ್ರಾಣಿಗಳ ವಿಕಾಸಕ್ಕೆ ಅನುಕೂಲಕರವಾಗಿದ್ದ ಪರಿಸರದ ಸಂಗತಿಗಳೆಂದರೆ ಅಧಿಕ ನೆಲ ಜಲ ಸಂಪತ್ತಿನ ಜೊತೆಗೆ ಸಮೃದ್ಧ ಆಹಾರ ಒದಗಿಸುತ್ತಿದ್ದ ಕಾಡುಗಳು, ಒಳ್ಳೆಯ ಜೈವಿಕ ಪರಿಸರ ಹಾಗೂ ಆಹ್ಲಾದಕರವಾದ ವಾಯುಗುಣ, ಸ್ವೇಚ್ಛಾ ವಿಹಾರಕ್ಕೆ ನದಿ, ಕೊಳ ಮತ್ತು ಸರೋವರಗಳ ಬಯಲು ಮುಂತಾದವು ನಾನಾ ಜೀವಿಗಳ ಶಿಘ್ರ ವಿಕಾಸಕ್ಕೆ ಕಾರಣವಾಗಿರಬೇಕೆಂದು ಪರಿಗಣಿಸಲಾಗಿದೆ. ಈ ಕಾಲದಲ್ಲಿದ್ದ ಪ್ರಾಣಿಗಳಲ್ಲಿ ಕೆಲವು ಮೂಲತಃ ಭಾರತ ವಂಶದÀವುಗಳಲ್ಲವೆಂದೂ ಅವು ಈಶಾನ್ಯ ಆಫ್ರಿಕ, ಅರೇಬಿಯ, ಮಧ್ಯ ಏಷ್ಯಾ ಮತ್ತು ಉತ್ತರ ಅಮೆರಿಕದಿಂದ ವಲಸೆ ಬಂದಿರಬಹುದೆಂದೂ ಕೆಲವು ಭೂವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

	ಶಿವಾಲಿಕ್ ಸಮುದಾಯವನ್ನು ಜೀವ್ಯವಶೇಷಗಳ ಆಧಾರದ ಮೇಲೆ ಕೆಳಗಣ, ಮಧ್ಯಮ ಮತ್ತು ಮೇಲಣ ಸಮುದಾಯಗಳೆಂದು ಮೂರು ಭಾಗಗಳಾಗಿ ವಿಭಜಿಸಿದ್ದಾರೆ. ಈ ಶಿಲಾಸಮುದಾಯ ಅಖಂಡವಾಗಿ ನಿಕ್ಷೇಪಗೊಂಡ ದಪ್ಪ ಹರಳುಗಳ ಮರಳುಶಿಲೆ, ಹೆಚ್ಚಾಗಿ ಕೆಂಪು ಮತ್ತು ಕಂದುಬಣ್ಣದಿಂದ ಕೂಡಿದ ಜೇಡುಶಿಲೆ ಮತ್ತು ಪೆಂಟೆ ಶಿಲೆಗಳನ್ನು ಒಳಗೊಂಡಿದೆ. ಸಿಂಧ್‍ನಲ್ಲಿ ರೂಪುಗೊಂಡಿರುವ ಶಿವಾಲಿಕ್ ಶಿಲಾವರ್ಗವನ್ನು ಮಂಜಾರ್ ಶಿಲಾಶ್ರೇಣಿಗಳೆಂದು ಕರೆಯುತ್ತಾರೆ. ಅಸ್ಸಾಮಿನಲ್ಲಿ ಪ್ರಸರಿಸಿರುವ ಈ ಶಿಲಾಸ್ತೋಮ ತಿಪ್ಪಮ್, ದೂಪಿತಲ ಮತ್ತು ದಿಹಾಂಗ್ ಶಿಲಾಸ್ತೋಮಗಳೆಂದು ಕರೆಯಲ್ಪಟ್ಟಿದೆ. ತಿಪ್ಪಮ್ ಶಿಲಾಸ್ತೋಮ ಕಬ್ಬಿಣಾಂಶವುಳ್ಳ ಮರಳುಶಿಲೆ ಮರಳು ಕೂಡಿದ ಜೇಡು ಶಿಲೆಗಳಿಂದ ಕೂಡಿದ ಮತ್ತು ಶಿಲೆಗಳು ಸಾಗರಜೀವಿಗಳ ಅವಶೇಷಗಳನ್ನು ಒಳಗೊಂಡಿದೆ. ಈ ಸ್ತೋಮದ ಶಿಲಾಸ್ತರಗಳು ವಿವಿಧ ಮರಳುಶಿಲೆಗಳಿಂದ ಕೂಡಿ ಇದರಲ್ಲಿ ಮರದ ದಿಮ್ಮಿಗಳ ಅವಶೇಷಗಳು ಸಮಾಧಿಗೊಂಡಿವೆ. ಇದರ ಮೇಲೆ ರೂಪುಗೊಂಡಿರುವ ದಿಹಾಂಗ್ ಶಿಲಾಸ್ತೋಮ ದಪ್ಪಮರಳು ಶಿಲೆ, ಪೆಂಟೆ ಶಿಲೆ ಮತ್ತು ಜೇಡಿಮಣ್ಣು ನಿಕ್ಷೇಪಗಳಿಂದ ಕೂಡಿದೆ.

	(xv) ಪ್ಲೀಸ್ಟೊಸೀನ್ ನೀರ್ಗಲ್ಲು ಯುಗ: ಪ್ರಪಂಚದ ಉತ್ತರ ಗೋಳಾರ್ಧದ ಎಲ್ಲ ಪ್ರದೇಶಗಳಲ್ಲಿ ಪ್ಲೀಸ್ಟೋಸೀನ್ ಯುಗ ನೀರ್ಗಲ್ಲು ಯುಗವೆಂದು ಪ್ರಸಿದ್ಧಿಯಾಗಿದೆ. ಅಕ್ಷಾಂಶ 40(ಯಿಂದ ಉತ್ತರಕ್ಕೆ ಆಫ್ರಿಕ ಒಂದನ್ನು ಬಿಟ್ಟು ಉತ್ತರ ಗೋಳಾರ್ಧದ ಎಲ್ಲ ಖಂಡಗಳು ಹಿಮನದಿ ಮತ್ತು ನೀರ್ಗಲ್ಲು ಪದರುಗಳಿಂದ ಮುಚ್ಚಿಹೋಡಿದ್ದುವು. ಅಸೀಮವಾದ ಶೀತಲವಾಯುಗುಣದ ಪ್ರಭಾವವನ್ನು ಅಂದಿನ ಹಿಮನದಿಗಳು ಕೊರೆದು ಮಾಡಿದ ಭೂಮೇಲ್ಮೈಲಕ್ಷಣ ದಿಂದ, ಅವುಗಳ ಮೊರೆತ ಸಂಚಯಮಗಳಿಂದ, ಜೀವ್ಯವಶೇಷಗಳ ದಾಖಲೆಯಿಂದ, ಗರಿಷ್ಠ ಶೀತಲವಾತಾವರಣ ಜೀವಿತ ಸಸ್ಯ ಮತ್ತು ಪ್ರಾಣಿಗಳ ಮೇಲೆ ಮಾಡಿದ ಪರಿಣಾಮದಿಂದ ಮತ್ತು ಪ್ರಾಣಿಗಳ ಸ್ಥಳಾಂತರಗಳ ಅಧ್ಯಯನದಿಂದಲೂ ತಿಳಿಯಬಹುದು. ಭಾರತದಲ್ಲಿ ಹಿಮಾಲಯವನ್ನು ಬಿಟ್ಟು ಮಿಕ್ಕ ಪ್ರದೇಶಗಳು ನೀರ್ಗಲ್ಲು ಯುಗದ ತೀವ್ರತೆಯನ್ನು ಅನುಭವಿಸಿಲ್ಲ. ಹಿಮಾಲಯದಲ್ಲಿ ಹಿಮನದಿಯ ಕೊರತೆಗಳು 1800ಮೀ ಎತ್ತರ ಪ್ರದೇಶದವರೆಗೆ ಅತಿಶಯವಾಗಿದ್ದು ಅಲ್ಲಿಂದ 1400 ಮೀವರೆಗೆ ಹಿಮಸಂಚಯನ ಮತ್ತು ಮೊರೆತಗಳಿಂದ ಕಣಿವೆ ಮತ್ತು ಬೆಟ್ಟಗಳ ಇಕ್ಕಡೆಗಳೂ ಮುಚ್ಚಿಹೋಗಿದ್ದುವು. ದಕ್ಷಿಣಭಾರತದಲ್ಲಿ ನೀರ್ಗಲ್ಲುಯುಗದ ಗುರುತು ಉಷ್ಣತೆ ತೀವ್ರವಾಗಿ ಕಡಿಮೆಗೊಂಡು ಅತ್ಯಧಿಕ ಮಳೆ ಬೀಳುವೆಯಿದ್ದು ತೇವಾಂಶ ವಿಪರೀತವಾಗಿದ್ದುದು ಕಂಡುಬಂದಿದೆ. ಇಂಥ ಅತಿವೃಷ್ಟಿಗಳು ಪ್ರಳಯಕಾರಕಗಳಾಗಿ ಅತ್ಯುಚ್ಚವಾಗಿ ವಿಕಾಸಗೊಂಡಿದ್ದ ಶಿವಾಲಿಕ್ ಕಾಲದ ಸ್ತನಿವರ್ಗಗಳು ಅತ್ಯಾಶ್ಚರ್ಯಕರ ರೀತಿಯಲ್ಲಿ ಕ್ಷಿಪ್ರವಾಗಿ ನಿರ್ನಾಮಗೊಂಡವು. ನೀರ್ಗಲ್ಲುಯುಗದ ಅತಿಶೀತಲ ವಾಯುಗುಣದ ಚಳಿಯನ್ನು ತಡೆಯಲಾಗದೆ ಮತ್ತು ಪರಿಸರಗಳ ಮಹತ್ತರ ಬದಲಾವಣೆಯನ್ನು ಎದುರಿಸಲಾಗದೆ ಇವು ನಶಿಸಿದುವು ಎಂದು ಭೂವಿಜ್ಞಾನಿಗಳು ಭಾವಿಸಿದ್ದಾರೆ. ಸ್ತನಿಗಳಂತೆ ಹೆಚ್ಚು ವಿಕಾಸಗೊಂಡಿದ್ದ ಕೆಲವು ಜಾತಿಯ ಪ್ರಾಣಿಗಳು ಬದಲಾವಣೆಗೊಂಡ ಪರಿಸರಕ್ಕೆ ಹೊಂದಿಕೊಳ್ಳುವುದರ ಮೂಲಕ ಮತ್ತು ಪರಿಸರದಲ್ಲಿ ಕಡಿಮೆ ಬದಲಾವಣೆಗಳಿದ್ದ ಪ್ರದೇಶಕ್ಕೆ ವಲಸೆ ಹೋಗುವುದರ ಮೂಲಕ ಉಳಿದುಕೊಂಡಿವೆ. ಕಾಶ್ಮೀರದ ಹಿಮಾಲಯ ಮತ್ತು ಕಾರಾಕೋರಮ್ ಪ್ರದೇಶಗಳಲ್ಲಿ ನಡೆಸಿದ ಹಿಮನದಿಗಳ ಅಧ್ಯಯನ ಪೀರ್ ಪಂಜಾಲಿನ ಉತ್ತರಭಾಗ ಮತ್ತು ಕಾಶ್ಮೀರದ ಕಣಿವೆ ಅಂಚಿನ ಪರ್ವತಶ್ರೇಣಿಗಳಲ್ಲಿ ನಾಲ್ಕು ಹಿಮನದಿಗಳ ಹಂತಗಳು ಮೂರು ಮಧ್ಯಾಂತರ ಹಿಮನದಿಗಳ ಹಂತಗಳಿಂದ ಪ್ರತ್ಯೇಕಗೊಳಿಸಲ್ಪಟ್ಟಿದೆ ಎಂದು ತಿಳಿಸುತ್ತವೆ.

	(xvi) ಸಿಂಧೂ-ಗಂಗಾ ಮೆಕ್ಕಲು ನಿಕ್ಷೇಪ: ಭಾರತದ ಪ್ಲೇಸ್ಟೊಸೀನ್ ಯುಗದ ಅತಿ ಮುಖ್ಯ ಮತ್ತು ವಿಶಾಲ ವ್ಯಾಪ್ತಿಯ ಶಿಲಾಸ್ತೋಮವೆಂದರೆ ಸಿಂಧೂ-ಗಂಗಾ ಮೆಕ್ಕಲು ನಿಕ್ಷೇಪ. ಇದು ಹಿಮಾಲಯದ ಪಾದ ಮತ್ತು ವಿಂಧ್ಯಾ-ಕೈಮೂರ್ ಶ್ರೇಣಿಯ ಅಂಚುಗಳ ಮಧ್ಯೆ ಟರ್ಷಿಯರಿ ಕಲ್ಪದಲ್ಲಿ ಹಿಮಾಲಯ ಮೇಲೆತ್ತಲ್ಪಲ್ಟಾಗ ಉಂಟಾದ ಮಹಾ ಮುನ್‍ತಗ್ಗು, ಈ ನಿಕ್ಷೇಪ ಮೆಕ್ಕಲು, ಮರಳು ಮತ್ತು ಮಡ್ಡಿಯಿಂದ ಕೂಡಿದೆ. ಮೆಕ್ಕಲು ನಿಕ್ಷೇಪದ ಆಳ ಸುಮಾರು 130-1800 ಮೀ ಇರಬಹುದೆಂದು ಭೂಭೌತ ಸರ್ವೇಕ್ಷಣೆಯಿಂದ ತಿಳಿದುಬಂದಿದೆ. ಮೆಕ್ಕಲು ನಿಕ್ಷೇಪದ ಕೆಳಗಡೆ ಇನ್ನೂ ಗಡುಸಾಗಿರದ ಶಿವಾಲಿಕ್ ಶಿಲೆಗಳು ಮತ್ತು ಟರ್ಷಿಯರಿ ಯುಗದ ಶಿಲೆಗಳಿವೆ. ಅದಕ್ಕಿಂತಲೂ ತಳದಲ್ಲಿ ಹೆಚ್ಚು ಗಡುಸಾಗಿರುವ ಮೇಲಣ ಗೊಂಡ್ವಾನ ಮತ್ತು ಕ್ರಿಟೇಷನ್ ಯುಗದ ಶಿಲೆಗಳಿವೆ ಎಂದು ಭೂಕಂಪನ ಸರ್ವೇಕ್ಷಣೆ ಮತ್ತು ಬೈರಿಗೆ ದಿಂಡುಗಳ ಅಧ್ಯಯನದಿಂದ ಗೊತ್ತಾಗಿದೆ. ದಕ್ಷಿಣಭಾಗಕ್ಕಿಂತ ಉತ್ತರಭಾಗದಲ್ಲಿ ಆಳ ಅಧಿಕ. ಮುನ್‍ತಗ್ಗಿನ ಉತ್ತರದ ಅಂಚು ಹಿಮಾಲಯದ ಪಾದವಲಯದ ಪಕ್ಕದಲ್ಲಿ ಸ್ತರಭಂಗಹೊಂದಿದ್ದು ರಚನಾತ್ಮಕ ಒತ್ತಡಗಳಿಗೆ ಬಲಿಯಾಗಿದೆ. ತಳಹದಿಯ ಶಿಲೆಗಳು ಮುದುಡಿ ಮತ್ತು ಮುರಿದು ಉಂಟಾದ ಕೆಲವು ಅಡ್ಡನೆಯ ದಿಂಡುಗಳು ಮೆಕ್ಕಲು ನಿಕ್ಷೇಪದಲ್ಲಿ ಅಡಗಿವೆ. ಗಂಗಾಬಟ್ಟಲ ಪ್ರದೇಶದ ರಚನಾತ್ಮಕ ಬಲಹೀನತೆ ಈ ವಲಯವನ್ನು ಭೂಚಲನವಲನದ ಕ್ಷೀಣಪ್ರದೇಶವನ್ನಾಗಿರಿಸಿದೆ. ಭಾರತದ ಭೂಕಂಪನ ಜಾಡು ಇದರ ಮುಖಾಂತರ ಹಾದು ಹಿಮಾಲಯದ ಅಂಚನ್ನು ಸೇರುತ್ತದೆ. ಈ ಮೆಕ್ಕಲು ಪ್ರದೇಶದಲ್ಲಿ ಖನಿಜನಿಕ್ಷೇಪಗಳಿಲ್ಲ. ಆದರೂ ವ್ಯವಸಾಯ ದೃಷ್ಠಿಯಲ್ಲಿ ಇದು ಅತಿ ಫಲವತ್ತಾದ ಪ್ರದೇಶ ಮತ್ತು ದೇಶದ ನಿಧಿ ಎನ್ನಬಹುದು. ಇಲ್ಲಿ ಹೆಚ್ಚು ರಂಧ್ರಸಾಂದ್ರತೆಯುಳ್ಳ ಶಿಲಾಸ್ತರಗಳಲ್ಲಿ ಶೇಖರಣೆಗೊಂಡಿರುವ ಸ್ವಚ್ಛವಾದ ಅಂತರ್ಜಲವನ್ನು ಸಾವಿರಾರು ಕೊಳವೆ ಬಾವಿಗಳ ಮುಖಾಂತರ ತೆಗೆದು ವ್ಯವಸಾಯಕ್ಕೆ ಉಪಯೋಗಿಸುತ್ತಾರೆ.

	(vxii) ಥಾರ್ ಮರುಭೂಮಿ: ಸಿಂಧೂ-ಗಂಗಾ ಬಯಲುಪ್ರದೇಶದ ಪಶ್ಚಿಮದ ಅಂಚಿನಿಂದ ಮತ್ತು ಆರಾವಳಿಪರ್ವತದ ಪಶ್ಚಿಮ ಭಾಗದಿಂದ, ಸಿಂಧೂ ನದಿಯ ಬೋಗುಣಿಯವರೆಗೆ ಸುಮಾರು 1,02,400 ಚಕಿಮೀ ಪ್ರದೇಶ ಗಾಳಿಯಿಂದ ಸಂಯನಗೊಂಡ ಮರಳಿನಿಂದ ಆವರಿಸಿರುವ ಒಣಹವೆಯ ಬಂಜರುಭೂಮಿ. ಇದನ್ನು ಥಾರ್ ಮರುಭೂಮಿ ಎನ್ನುತ್ತಾರೆ. ಪ್ರಚಂಡವಾದ ಗಾಳಿಯ ಹೊಡಿತದಿಂದ ಮರಳು ದಿಬ್ಬಗಳಂತೆಯೂ ಗುಡ್ಡಗಳಂತೆಯೂ ರಾಶಿಯಾಗಿ ಬಿದ್ದಿವೆ. ರಜಪುತಾನದ ಈ ಮರುಭೂಮಿ 5000 ವರ್ಷಗಳ ಹಿಂದೆ ಸಮೃದ್ಧವಾದ ನೀರನ್ನು ಹೊಂದಿ ಕಾಡುಗಳು ವ್ಯಾಪಿಸಿದ್ದ ಪ್ರದೇಶವಾಗಿದ್ದುದಕ್ಕೆ ಚರಿತ್ರಾರ್ಹ ದಾಖಲೆಗಳಿವೆ.

	ಥಾರ್ ಮರುಭೂಮಿ ನೈಋತ್ಯಕ್ಕೆ ಕಚ್‍ರಾಣಾ ಎಂಬ ಹೆಸರಿನ ವಿಶಾಲ ತಗ್ಗಿನ ಹತ್ತಿರ ಅಂತ್ಯಗೊಳ್ಳುತ್ತದೆ. ಈ ತಗ್ಗು ಸಿಂಧೂ-ಗಂಗಾ ಮುನ್‍ತಗ್ಗಿನ ಒಂದು ಶಾಖೆ. ಇದು ನವಜೀವಕಲ್ಪದಲ್ಲಿ ಭೂಭಾಗವಾಗಿ ರೂಪುಗೊಂಡಿತು. ಈ ಪ್ರದೇಶ ಉಪ್ಪುನೀರಿನ ಜೌಗುಭೂಮಿಯಾಗಿ ಸದಾನೀರಿನಿಂದ ಆವರಿಸಲ್ಪಟ್ಟಿರುತ್ತದೆ ಮತ್ತು ಬೇಸಗೆಯಲ್ಲಿ ಒಣಗಿರುತ್ತದೆ. ಇಲ್ಲಿ ಮರಳಿನೊಡನೆ ದೊಡ್ಡ ದೊಡ್ಡ ಪೆಟ್ಟಿಗೆ ಆಕಾರದ ಮತ್ತು ಕಣ್ಣಿನಾಕಾರದ ಲವಣ ನಿಕ್ಷೇಪಗಳಿವೆ. ಹಿಂದೊಮ್ಮೆ ಅರಬ್ಬೀ ಸಮುದ್ರದ ಕೋವೆಯಾಗಿದ್ದ ಈ ಭಾಗ ಅನೇಕ ಸಣ್ಣ ನದಿಗಳು ಸಂಚಯಿಸಿದ ಮೆಕ್ಕಲು ಮಣ್ಣಿನಿಂದ ತುಂಬಲ್ಪಟ್ಟಿದೆ.

	(xviii) ಲ್ಯಾಡರೈಟ್: ಭಾರತ ಪರ್ಯಾಯದ್ವೀಪದಲ್ಲಿ ಪ್ಲೀಸ್ಟೊಸೀನ್ ಅಥವಾ ಟರ್ಷಿಯರಿ ಕಲ್ಪದ ಅಂತ್ಯಕಾಲದ ನಿಕ್ಷೇಪಗಳು ಲ್ಯಾಟರೈಟ್ ಶಿಲೆಗಳಿಂದ ಆಗಿವೆ. ಇವು ಕೆಂಪು ಅಥವಾ ಕಂದುಬಣ್ಣದ, ಮಡ್ಡಿಯುಳಿದು ತೂತುಗಳುಳ್ಳ ಮತ್ತು ಬಟಾಣಿ ಕಾಳಿನಂತೆ ಸಣ್ಣ ಗುಂಡುಗಳಿರುವ ಜೇಡುಶಿಲೆ. ಅಧಿಕ ಶಿಥಿಲೀಕರಣಕ್ಕೊಳಗಾದ ಮಾತೃಶಿಲೆಗಳಿಂದ ಹೊರಬಂದ ಅಲ್ಯೂಮಿನಿಯಮ್ ಮತ್ತು ಕಬ್ಬಿಣ ಆಕ್ಸೈಡ್ ಹೊಂದಿರುವ ಈ ಶಿಲೆಗಳನ್ನು ತುರ್ತು ಪರಿಸ್ಥಿತಿಗಳಲ್ಲಿ ಕಬ್ಬಿಣದ ಅಥವಾ ಅಲ್ಯೂಮಿನಿಯಮ್ಮಿನ ಅದುರುಗಳಾಗಿ ಉಪಯೋಗಿಸುವುದುಂಟು. ಲ್ಯಾಟರೈಟ್ ಶಿಲೆಗಳು 15 ರಿಂದ 60 ಮೀ. ದಪ್ಪದ ಕವಚದಂತೆ ದಖನ್ ಜ್ವಾಲಾಮುಖಿಜಶಿಲೆಗಳ ಮೇಲೆ ಹರಡಿವೆ. ಇದೇ ರೀತಿ ಬಿಹಾರ್ ಬಂಗಾಲ, ಅಸ್ಸಾಮ್ ಮತ್ತು ಮಧ್ಯಪ್ರದೇಶಗಳಲ್ಲೂ ವಿವಿಧ ಶಿಲೆಗಳ ಮೇಲೆ ಹರಡಿವೆ. ಲ್ಯಾಟರೈಟುಗಳು ಅಧಿಕ ತೇವಾಂಶದ ವಾಯುಗುಣ, ಬಿಸಿಲು ಮತ್ತು ಮಳೆಗಾಲಗಳು ಒಂದಾದಮೇಲೊಂದರಂತೆ ಬರುವ ಉಷ್ಣಪ್ರದೇಶಗಳಲ್ಲಿ ಆಗುವ ಭೌತ ಮತ್ತು ರಾಸಾಯನಿಕ ಬದಲಾವಣೆ ಮತ್ತು ಸವೆತಗಳ ಕಾರ್ಯಾಚರಣೆಗಳಿಂದ ಉಂಟಾಗಿವೆ. ಶಿಥಿಲೀಕರಣ ಹೆಚ್ಚು ಮುಂದುವರಿದು ಅಲ್ಯೂಮಿನಿಯಮ್ ಆಕ್ಸೈಡ್ ಅಧಿಕ ಪ್ರಮಾಣದಲ್ಲಿ ಸಂಗ್ರಹಗೊಂಡಿರುವುದನ್ನು ಬಾಕ್ಸೈಟ್ ಎಂದು ಕರೆಯುತ್ತಾರೆ. ಉತ್ತಮವಾದ ಬಾಕ್ಸೈಟ್ ನಿಕ್ಷೇಪಗಳು ರಾಂಚಿ, ಮಧ್ಯಪ್ರದೇಶ, ಸೇಲಮ್, ಭೋಪಾಲ್ ಹಾಗೂ ಮಹಾರಾಷ್ಟ್ರ ಮತ್ತು ಕರ್ನಾಟಕಗಳ ತೀರಪ್ರದೇಶಗಳಲ್ಲಿವೆ.

	(xix) ಮೆಕ್ಕಲು ನಿಕ್ಷೇಪ: ನರ್ಮದಾ ಮತ್ತು ತಪತೀ ನದಿಗಳ ಕಣಿವೆ ಪ್ರದೇಶಗಳಲ್ಲಿ ಚೆನ್ನಾಗಿ ರೂಪುಗೊಂಡಿರುವ ಮೆಕ್ಕಲು ನಿಕ್ಷೇಪಗಳಿವೆ. ಗೋದಾವರಿ, ಕೃಷ್ಣ ಮತ್ತು ಕಾವೇರಿ ನದಿಗಳ ಕಣಿವೆ ಪ್ರದೇಶಗಳಲ್ಲಿ ಸಾಧಾರಣ ನಿಕ್ಷೇಪಗಳಿವೆ. ಬೇರೆ ಬೇರೆ ಮಟ್ಟಗಳಲ್ಲಿ ಪ್ರತಿನಿಧಿಸಿರುವ ಮತ್ತು ನೂರಾರು ಮೀಟರುಗಳ ಅಂತರವುಳ್ಳ ಮೆಕ್ಕಲು ನಿಕ್ಷೇಪಗಳು ಸಟ್ಲೆಜ್, ಜೀಲಮ್, ಚೀನಾಬ್, ಯಮುನಾ ಮತ್ತು ಗಂಗಾನದಿಗಳ ಕಣಿವೆಗಳಲ್ಲಿ ಸಂಚಯನಗೊಂಡಿವೆ. ನರ್ಮದಾ ಮತ್ತು ತಪತಿ ಮೆಕ್ಕಲು ಸ್ತರಗಳು ಅತ್ಯಂತ ಆಳವಾದ ಬೋಗುಣಿಗಳಲ್ಲಿ ಸಂಚಯಿಸಿದ್ದು ಪ್ರಾಯಶಃ ಸ್ತರಭಂಗಗಳಿಂದ ಸುಮಾರು 150 ಮೀವರೆಗೆ ಈಗಿನ ನದಿದಂಡೆಗಳ ಮಟ್ಟಕ್ಕೆ ಮೇಲೇರಲ್ಪಟ್ಟಿವೆ. ಕಾಶ್ಮೀರದ ಕಣಿವೆ ವಿಶಾಲವಾದ ಸಮುಖಾವಲೋಕನ ಬೋಗುಣಿಯಂತಿದ್ದು ಪ್ಲೀಸ್ಟೊಸೀನ್ ಪ್ರಾರಂಭದ ಮತ್ತು ಪ್ಲಿಯೋಸೀನ್ ಅಂತ್ಯದ ಪ್ರಾಚೀನ ಸರೋವರಗಳ ಮೆಕ್ಕಲು ನಿಕ್ಷೇಪ ಅತ್ಯಂತ ಚೆನ್ನಾಗಿ ರೂಪುಗೊಂಡಿವೆ. ಅನಂತರ ಶಿಥಿಲೀಕರಣಗೊಂಡಿರುವ ಈ ನಿಕ್ಷೇಪಗಳನ್ನು ಕರೇವಾ ಎಂದು ಕರೆಯುತ್ತಾರೆ. ಇಂಥ ಮೆಕ್ಕಲು ಸ್ತರಗಳು ಮಟ್ಟದಿಬ್ಬಗಳಾಗಿ ಅಥವಾ ಮಟ್ಟಸ್ತರಗಳಾಗಿ ಪರ್ವತಗಳಿಂದ ಹೊರಕ್ಕೆ ಇಳಿಜಾರು ಹೊಂದಿ ಎಲ್ಲ ಕಡೆಗಳಿಂದಲೂ ಕಾಶ್ಮೀರ ಕಣಿವೆಯನ್ನು ಸುತ್ತುವರಿದಿದೆ. ಈ ನಿಕ್ಷೇಪಗಳಲ್ಲಿ ಅನೇಕ ಆನೆಗಳು, ಗೊರಸುಪ್ರಾಣಿಗಳು ಖಡ್ಗಮೃಗ, ಮಾನವನ ಸಾಧನ ಸಾಮಗ್ರಿ ಮತ್ತು ಸಾಧಾರಣ ಉಷ್ಣತೆಯಲ್ಲಿ ಬೆಳೆವ ನೂರಾರು ಬಗೆಯ ತಳಿಗಳ ಗಿಡಗಳ ಪಳೆಯುಳಿಕೆಗಳು ಅಡಗಿವೆ.

	(xx) ಕಪ್ಪು ಹತ್ತಿಹಣ್ಣು: ಭಾರತದ ಮಡ್ಡಿಮಣ್ಣುಗಳಲ್ಲಿ ಭೂವೈಜ್ಞಾನಿಕ ಮತ್ತು ವ್ಯವಸಾಯ ದೃಷ್ಟಿಯಿಂದ ದಖನ್ ಜ್ವಾಲಾಮುಖಿ ಶಿಲೆಗಳು ಶಿಥಿಲೀಕರಣಗೊಂಡು ಉಂಟಾದ ಕಪ್ಪುಬಣ್ಣದ ಸಣ್ಣನವುರಿನ ಮಣ್ಣು ಅತಿ ಮುಖ್ಯವಾದುದು. ಇದು ಹರಡಿರುವ ಪ್ರದೇಶಗಳಲ್ಲಿ ಮುಖ್ಯವಾಗಿ ಹತ್ತಿಯನ್ನು ಬೆಳೆಸುವುದರಿಂದ ಇದನ್ನು ಕಪ್ಪುಬಣ್ಣದ ಹತ್ತಿಮಣ್ಣು ಎಂದು ಕರೆಯುತ್ತಾರೆ. ಇದು ಗುಜರಾತ್, ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿ ಹರಡಿದೆ. ಹಲವಾರು ಶತಮಾನಗಳಿಂದ ಗೊಬ್ಬರವಿಲ್ಲದೆ ಬೆಳೆತೆಗೆಯುತ್ತ ಬಂದರೂ ಮಣ್ಣಿನ ಫಲವತ್ತತೆಗೆ ಚ್ಯುತಿಬಂದಿಲ್ಲ.

	(xxi) ಮಾನವಕಲ್ಪ: ಪ್ರಪಂಚದ ಇತರ ಭಾಗಗಳಂತೆ ಭಾರತದಲ್ಲಿ ಮಧ್ಯಮ ಮತ್ತು ಮೇಲಣ ಪ್ಲೀಸ್ಟೊಸೀನ್ ಯುಗದಲ್ಲಿ ಮಾನವನ ಇರುವಿಕೆಯ ಗುರುತುಗಳಿವೆ. ಪ್ರಚೀನ ಮಾನವನ ಕುರುಹುಗಳು ಅವನ ಆಯುಧ ಮತ್ತು ಸಾಮಗ್ರಿಗಳು ನಿಕ್ಷೇಪದಂತೆ ಸಂರಕ್ಷಿತಗೊಂಡಿವೆ. ಇಂಥ ನಿಕ್ಷೇಪಗಳು ಹಿಮಾಲಯದ ನದಿಗಳು, ನರ್ಮದಾ, ಗೋದಾವರಿ ಮತ್ತು ಸನ್ ನದೀ ಕಣಿವೆಗಳಲ್ಲಿ ವಿಪುಲವಾಗಿ ದೊರೆತಿವೆ. ಆದರೆ ಭಾರತದಲ್ಲಿ ಇಲ್ಲಿಯತನಕ ಮಾನವನ ಪಳೆಯುಳಿಕೆ ಸಿಕ್ಕಿಲ್ಲ.	
(ಎಂ.ಜಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ